ಪಿಲಾತನಿಗೆ ಒಪ್ಪಿಸಲ್ಪಟ್ಟ ಯೇಸು
ಇದು ಹೊಟ್ಟೆಕಿಚ್ಚು ಎಂದು ಪಿಲಾತನಿಗೆ ತಿಳಿದಿದೆ, ಆದರೂ ಜನಸಮೂಹವು ಬರಬ್ಬನನ್ನು ಆರಿಸಿಕೊಂಡಾಗ ಅವನು ಮಣಿದುಬಿಡುತ್ತಾನೆ. ಸೈನಿಕರು ಆತನನ್ನು ಅರಸನೆಂದು ಅಪಹಾಸ್ಯಮಾಡುತ್ತಾರೆ. ಒಂಬತ್ತು ಗಂಟೆಗೆ ಆತನು ಶಿಲುಬೆಗೆ ಹಾಕಲ್ಪಡುತ್ತಾನೆ, ದೇವರು ತನ್ನನ್ನು ಕೈಬಿಟ್ಟಿದ್ದಾನೆ ಎಂದು ಕೂಗುತ್ತಾನೆ, ಮತ್ತು ಕತ್ತಲೆಯಲ್ಲಿ ಸಾಯುತ್ತಾನೆ. ಒಬ್ಬ ಶತಾಧಿಪತಿಯೂ ನೋಡುತ್ತಿದ್ದ ಸ್ತ್ರೀಯರೂ ಮಾತ್ರ ಉಳಿಯುತ್ತಾರೆ.
15 1ಬೆಳಗಾಗುತ್ತಲೇ ಮುಖ್ಯಯಾಜಕರೂ ಹಿರಿಯರೂ ಶಾಸ್ತ್ರಿಗಳೂ ಇಡೀ ನ್ಯಾಯಸಭೆಯೂ ಒಟ್ಟಾಗಿ ಆಲೋಚಿಸಿ, ಯೇಸುವನ್ನು ಕಟ್ಟಿ, ಕರೆದುಕೊಂಡುಹೋಗಿ, ಪಿಲಾತನಿಗೆ ಒಪ್ಪಿಸಿದರು.
2ಪಿಲಾತನು ಆತನನ್ನು, “ನೀವು ಯೆಹೂದ್ಯರ ಅರಸರೋ?” ಎಂದು ಕೇಳಿದನು. ಅದಕ್ಕೆ ಯೇಸು, “ನೀನೇ ಹೇಳುತ್ತೀ,” ಎಂದರು.
3ಮುಖ್ಯಯಾಜಕರು ಆತನ ಮೇಲೆ ಅನೇಕ ದೋಷಗಳನ್ನು ಹೊರಿಸುತ್ತಲೇ ಇದ್ದರು. 4ಆಗ ಪಿಲಾತನು ತಿರಿಗಿ ಆತನನ್ನು, “ನೀವು ಏನೂ ಉತ್ತರ ಕೊಡುವುದಿಲ್ಲವೋ? ಇವರು ನಿಮ್ಮ ಮೇಲೆ ಎಷ್ಟೊಂದು ದೋಷಗಳನ್ನು ಹೊರಿಸುತ್ತಿದ್ದಾರೆ, ನೋಡಿ,” ಎಂದು ಕೇಳಿದನು.
5ಆದರೆ ಯೇಸು ಅದಕ್ಕೆ ಇನ್ನೇನೂ ಉತ್ತರ ಹೇಳದೆ ಇದ್ದುದರಿಂದ ಪಿಲಾತನು ಆಶ್ಚರ್ಯಪಟ್ಟನು.
6ಹಬ್ಬದ ಸಮಯದಲ್ಲಿ ಪಿಲಾತನು ಜನರು ಕೇಳಿಕೊಂಡ ಒಬ್ಬ ಸೆರೆಯವನನ್ನು ಅವರಿಗಾಗಿ ಬಿಡುಗಡೆಮಾಡುವ ಪದ್ಧತಿ ಇತ್ತು. 7ಬರಬ್ಬ ಎಂಬ ಒಬ್ಬ ಮನುಷ್ಯನು, ದಂಗೆಯ ಸಮಯದಲ್ಲಿ ಕೊಲೆಮಾಡಿದ್ದ ದಂಗೆಕೋರರ ಸಂಗಡ ಸೆರೆಯಲ್ಲಿದ್ದನು. 8ಜನಸಮೂಹವು ಬಂದು, ಪಿಲಾತನು ಯಾವಾಗಲೂ ಮಾಡುತ್ತಿದ್ದ ಹಾಗೆ ತಮಗಾಗಿ ಮಾಡಬೇಕೆಂದು ಕೇಳಿಕೊಳ್ಳಲಾರಂಭಿಸಿತು. 9ಅದಕ್ಕೆ ಪಿಲಾತನು, “ನಾನು ನಿಮಗೋಸ್ಕರ ಯೆಹೂದ್ಯರ ಅರಸರನ್ನು ಬಿಡುಗಡೆಮಾಡಬೇಕೆಂದು ಅಪೇಕ್ಷಿಸುತ್ತೀರೋ?” ಎಂದು ಉತ್ತರಕೊಟ್ಟನು. 10ಮುಖ್ಯಯಾಜಕರು ಹೊಟ್ಟೆಕಿಚ್ಚಿನಿಂದ ಆತನನ್ನು ಒಪ್ಪಿಸಿದ್ದಾರೆಂದು ಅವನು ತಿಳಿದಿದ್ದನು. 11ಆದರೆ ಮುಖ್ಯಯಾಜಕರು, ಅದಕ್ಕೆ ಬದಲಾಗಿ ಬರಬ್ಬನನ್ನು ತಮಗೆ ಬಿಡುಗಡೆಮಾಡಬೇಕೆಂದು ಜನಸಮೂಹವನ್ನು ಪ್ರಚೋದಿಸಿದರು. 12ಪಿಲಾತನು ಪುನಃ ಅವರನ್ನು, “ಹಾಗಾದರೆ ನೀವು ಯೆಹೂದ್ಯರ ಅರಸರೆಂದು ಕರೆಯುವವರನ್ನು ನಾನೇನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದನು.
13ಅದಕ್ಕೆ ಅವರು, “ಆತನನ್ನು ಶಿಲುಬೆಗೆ ಹಾಕಿಸಿ!” ಎಂದು ಕೂಗಿದರು.
14ಅದಕ್ಕೆ ಪಿಲಾತನು, “ಏಕೆ? ಈತನು ಯಾವ ಕೆಟ್ಟ ಕಾರ್ಯ ಮಾಡಿದ್ದಾರೆ?” ಎಂದು ಕೇಳಿದನು. ಆದರೆ ಅವರು, “ಆತನನ್ನು ಶಿಲುಬೆಗೆ ಹಾಕಿಸಿ!” ಎಂದು ಮತ್ತಷ್ಟು ಜೋರಾಗಿ ಕೂಗಿದರು.
15ಪಿಲಾತನು ಜನಸಮೂಹವನ್ನು ಸಮಾಧಾನಪಡಿಸಲೆಂದು ಅವರಿಗೆ ಬರಬ್ಬನನ್ನು ಬಿಡುಗಡೆಮಾಡಿ, ಯೇಸುವನ್ನು ಕೊರಡೆಯಿಂದ ಹೊಡಿಸಿ, ಶಿಲುಬೆಗೆ ಹಾಕುವಂತೆ ಒಪ್ಪಿಸಿದನು.
ಸೈನಿಕರು ಅರಸನನ್ನು ಅಪಹಾಸ್ಯಮಾಡಿದ್ದು
16ಸೈನಿಕರು ಆತನನ್ನು ಅರಮನೆಯ ಒಳಕ್ಕೆ (ಅಂದರೆ ದೇಶಾಧಿಪತಿಯ ಅಧಿಕಾರಸ್ಥಾನಕ್ಕೆ) ಕರೆದುಕೊಂಡುಹೋಗಿ, ಸೈನಿಕರ ಇಡೀ ತಂಡವನ್ನು ಒಟ್ಟಿಗೆ ಕರೆದರು. 17ಅವರು ಆತನಿಗೆ ಧೂಮ್ರವರ್ಣದ ನಿಲುವಂಗಿಯನ್ನು ತೊಡಿಸಿ, ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟರು. 18ಆಮೇಲೆ, “ಯೆಹೂದ್ಯರ ಅರಸರೇ, ನಮಸ್ಕಾರ!” ಎಂದು ಆತನಿಗೆ ವಂದನೆ ಮಾಡಲಾರಂಭಿಸಿದರು. 19ಅವರು ಕೋಲಿನಿಂದ ಆತನ ತಲೆಯ ಮೇಲೆ ಹೊಡೆಯುತ್ತಾ, ಆತನ ಮೇಲೆ ಉಗುಳುತ್ತಾ, ಮೊಣಕಾಲೂರಿ ಕಪಟ ನಮಸ್ಕಾರ ಮಾಡಿದರು. 20ಅವರು ಆತನನ್ನು ಅಪಹಾಸ್ಯಮಾಡಿದ ಬಳಿಕ, ಆ ಧೂಮ್ರವರ್ಣದ ನಿಲುವಂಗಿಯನ್ನು ತೆಗೆದು, ಆತನ ಸ್ವಂತ ಬಟ್ಟೆಗಳನ್ನು ತೊಡಿಸಿ, ಶಿಲುಬೆಗೆ ಹಾಕುವುದಕ್ಕೆ ಹೊರಗೆ ಕರೆದುಕೊಂಡುಹೋದರು.
ಪುತ್ರನನ್ನು ಶಿಲುಬೆಗೆ ಹಾಕಿದ್ದು
21ಹಳ್ಳಿಯಿಂದ ಬರುತ್ತಿದ್ದ ಒಬ್ಬ ದಾರಿಹೋಕನನ್ನು—ಅಲೆಕ್ಸಾಂದ್ರ ಮತ್ತು ರೂಫರ ತಂದೆಯಾದ ಕುರೇನದ ಸೀಮೋನನನ್ನು—ಆತನ ಶಿಲುಬೆಯನ್ನು ಹೊರುವಂತೆ ಬಲವಂತಪಡಿಸಿದರು. 22ಅವರು ಯೇಸುವನ್ನು ಗೊಲ್ಗೊಥಾ ಎಂಬ ಸ್ಥಳಕ್ಕೆ ಕರೆತಂದರು (ಅಂದರೆ “ಕಪಾಲದ ಸ್ಥಳ” ಎಂದರ್ಥ). 23ಅವರು ಆತನಿಗೆ ರಕ್ತಬೋಳ ಬೆರೆಸಿದ ದ್ರಾಕ್ಷಾರಸವನ್ನು ಕೊಟ್ಟರು, ಆದರೆ ಆತನು ಅದನ್ನು ತೆಗೆದುಕೊಳ್ಳಲಿಲ್ಲ.
24ಅವರು ಆತನನ್ನು ಶಿಲುಬೆಗೆ ಹಾಕಿದರು. ಯಾರಿಗೆ ಏನು ಸಿಗಬೇಕೆಂದು ಚೀಟುಹಾಕಿ, ಆತನ ಬಟ್ಟೆಗಳನ್ನು ತಮ್ಮೊಳಗೆ ಹಂಚಿಕೊಂಡರು. 25ಅವರು ಆತನನ್ನು ಶಿಲುಬೆಗೆ ಹಾಕಿದಾಗ ಬೆಳಗಿನ ಒಂಬತ್ತು ಗಂಟೆಯಾಗಿತ್ತು. 26ಆತನ ಮೇಲೆ ಹೊರಿಸಿದ ದೋಷವನ್ನು ಸೂಚಿಸುವ ಫಲಕದಲ್ಲಿ, ಯೆಹೂದ್ಯರ ಅರಸನು ಎಂದು ಬರೆದಿತ್ತು. 27ಆತನ ಸಂಗಡ ಇಬ್ಬರು ದಂಗೆಕೋರರನ್ನು—ಒಬ್ಬನನ್ನು ಆತನ ಬಲಗಡೆಯಲ್ಲಿ, ಒಬ್ಬನನ್ನು ಎಡಗಡೆಯಲ್ಲಿ—ಶಿಲುಬೆಗೆ ಹಾಕಿದರು. a a v27 ಅತ್ಯಂತ ಪುರಾತನ ಹಸ್ತಪ್ರತಿಗಳಲ್ಲಿ ಇಲ್ಲಿ 28ನೆಯ ವಚನವಿಲ್ಲ; ಅನಂತರದ ಪ್ರತಿಗಳಲ್ಲಿ ಹೀಗೆ ಸೇರಿಸಲ್ಪಟ್ಟಿದೆ: “ ‘ಆತನು ಅಪರಾಧಿಗಳೊಂದಿಗೆ ಎಣಿಸಲ್ಪಟ್ಟನು’ ಎಂದು ಹೇಳುವ ಶಾಸ್ತ್ರವಚನವು ನೆರವೇರಿತು.”
29ಅಲ್ಲಿ ಹಾದುಹೋಗುತ್ತಿದ್ದವರು ತಲೆಯಾಡಿಸುತ್ತಾ ಆತನನ್ನು ದೂಷಿಸಿ, “ಆಹಾ! ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವರೇ, 30ನಿಮ್ಮನ್ನು ನೀವೇ ರಕ್ಷಿಸಿಕೊಂಡು ಶಿಲುಬೆಯಿಂದ ಇಳಿದುಬನ್ನಿ!” ಎಂದರು.
31ಅದೇ ರೀತಿ ಮುಖ್ಯಯಾಜಕರೂ ಶಾಸ್ತ್ರಿಗಳೂ ತಮ್ಮತಮ್ಮೊಳಗೆ ಆತನನ್ನು ಅಪಹಾಸ್ಯಮಾಡುತ್ತಾ ಹೀಗೆಂದರು: “ಈತನು ಇತರರನ್ನು ರಕ್ಷಿಸಿದರು; ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾರರು. 32ಇಸ್ರಾಯೇಲಿನ ಅರಸರಾದ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದುಬರಲಿ; ಆಗ ನಾವು ಕಂಡು ನಂಬುತ್ತೇವೆ.” ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟವರೂ ಆತನನ್ನು ದೂಷಿಸಿದರು.
ಪಿತನ ಪುತ್ರನು ಪ್ರಾಣಬಿಟ್ಟದ್ದು
33ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯ ತನಕ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
34ಮಧ್ಯಾಹ್ನ ಮೂರು ಗಂಟೆಗೆ ಯೇಸು ಮಹಾಧ್ವನಿಯಿಂದ, “ಎಲೋಹೀ, ಎಲೋಹೀ, ಲಮಾ ಸಬಕ್ತಾನೀ?” ಎಂದು ಕೂಗಿದರು; ಅಂದರೆ, “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀರಿ?” ಎಂದರ್ಥ.
35ಹತ್ತಿರ ನಿಂತಿದ್ದ ಕೆಲವರು ಇದನ್ನು ಕೇಳಿ, “ಇಗೋ, ಈತನು ಎಲೀಯನನ್ನು ಕರೆಯುತ್ತಿದ್ದಾರೆ,” ಎಂದರು.
36ಅವರಲ್ಲಿ ಒಬ್ಬನು ಓಡಿಹೋಗಿ, ಸ್ಪಂಜನ್ನು ಹುಳಿ ದ್ರಾಕ್ಷಾರಸದಲ್ಲಿ ತೊಯಿಸಿ, ಅದನ್ನು ಬೆತ್ತಕ್ಕೆ ಸಿಕ್ಕಿಸಿ, ಆತನಿಗೆ ಕುಡಿಯಲು ಕೊಟ್ಟು, “ಬಿಡಿ, ಎಲೀಯನು ಬಂದು ಈತನನ್ನು ಇಳಿಸುತ್ತಾರೋ ನೋಡೋಣ,” ಎಂದನು.
37ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟರು. 38ಆಗ ದೇವಾಲಯದ ತೆರೆ ಮೇಲಿನಿಂದ ಕೆಳಗಿನ ತನಕ ಎರಡಾಗಿ ಹರಿದುಹೋಯಿತು. 39ಆತನ ಎದುರಿಗೆ ನಿಂತಿದ್ದ ಶತಾಧಿಪತಿಯು, ಆತನು ಹೀಗೆ ಪ್ರಾಣಬಿಟ್ಟದ್ದನ್ನು ಕಂಡು, “ನಿಜವಾಗಿಯೂ ಈ ವ್ಯಕ್ತಿ ದೇವರ ಪುತ್ರನಾಗಿದ್ದರು,” ಎಂದನು.
40ಕೆಲವು ಸ್ತ್ರೀಯರೂ ದೂರದಿಂದ ನೋಡುತ್ತಿದ್ದರು; ಅವರಲ್ಲಿ ಮಗ್ದಲದ ಮರಿಯಳು, ಕಿರಿಯ ಯಾಕೋಬನ ಮತ್ತು ಯೋಸೆಯ ತಾಯಿಯಾದ ಮರಿಯಳು, ಸಲೋಮೆ ಇದ್ದರು. 41ಈ ಸ್ತ್ರೀಯರು ಗಲಿಲಾಯದಲ್ಲಿ ಆತನನ್ನು ಹಿಂಬಾಲಿಸಿ ಆತನ ಸೇವೆಮಾಡಿದ್ದರು; ಆತನ ಸಂಗಡ ಯೆರೂಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರೂ ಅಲ್ಲಿದ್ದರು.
ಸಮಾಧಿಯಲ್ಲಿ ಇಟ್ಟದ್ದು
42ಆಗಲೇ ಸಂಜೆಯಾಗಿತ್ತು; ಅದು ಸಬ್ಬತ್ತಿನ ಹಿಂದಿನ ದಿನವಾದ ಸಿದ್ಧತೆಯ ದಿನವಾಗಿತ್ತು. 43ನ್ಯಾಯಸಭೆಯ ಗಣ್ಯ ಸದಸ್ಯನಾದ, ತಾನೂ ನಮ್ಮ ತಂದೆಯ ಸಾಮ್ರಾಜ್ಯಕ್ಕಾಗಿ ಕಾಯುತ್ತಿದ್ದ ಅರಿಮತ್ತಾಯದ ಯೋಸೇಫನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಕೇಳಿದನು. 44ಆತನು ಆಗಲೇ ಸತ್ತಿದ್ದಾರೆಂದು ಪಿಲಾತನು ಆಶ್ಚರ್ಯಪಟ್ಟು, ಶತಾಧಿಪತಿಯನ್ನು ಕರೆಸಿ, ಯೇಸು ಸತ್ತು ಬಹಳ ಹೊತ್ತಾಯಿತೋ ಎಂದು ಕೇಳಿದನು. 45ಹಾಗೆಂದು ಶತಾಧಿಪತಿಯಿಂದ ತಿಳಿದುಕೊಂಡ ಮೇಲೆ, ಅವನು ಆ ದೇಹವನ್ನು ಯೋಸೇಫನಿಗೆ ಕೊಟ್ಟನು. 46ಯೋಸೇಫನು ನಾರುಬಟ್ಟೆಯನ್ನು ಕೊಂಡುಕೊಂಡು, ದೇಹವನ್ನು ಕೆಳಗಿಳಿಸಿ, ಆ ಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಇಟ್ಟನು. ಅನಂತರ ಸಮಾಧಿಯ ಬಾಗಿಲಿಗೆ ಒಂದು ಕಲ್ಲನ್ನು ಉರುಳಿಸಿದನು. 47ಮಗ್ದಲದ ಮರಿಯಳೂ ಯೋಸೆಯ ತಾಯಿ ಮರಿಯಳೂ ಆತನನ್ನು ಇಟ್ಟ ಸ್ಥಳವನ್ನು ನೋಡಿದರು.