ಯೇಸು ತಮ್ಮ ಮೊದಲ ಶಿಷ್ಯರನ್ನು ಕರೆಯುತ್ತಾರೆ
ಪೇತ್ರನು ರಾತ್ರಿಯೆಲ್ಲಾ ಮೀನು ಹಿಡಿದರೂ ಏನೂ ಸಿಗುವುದಿಲ್ಲ; ಆಮೇಲೆ ಯೇಸುವಿನ ಮಾತಿನಂತೆ ಎಷ್ಟೋ ಮೀನುಗಳನ್ನು ಎಳೆದು, ತನ್ನಿಂದ ದೂರ ಹೋಗಬೇಕೆಂದು ಆತನನ್ನು ಬೇಡುತ್ತಾನೆ. ಕುಷ್ಠರೋಗಿಯೊಬ್ಬನನ್ನು ಆತನು ಮುಟ್ಟುತ್ತಾನೆ. ಪಾರ್ಶ್ವವಾಯು ರೋಗಿಯನ್ನು ಮಾಳಿಗೆಯ ಮೂಲಕ ಇಳಿಸಲಾಗುತ್ತದೆ, ಮತ್ತು ನಮ್ಮ ತಂದೆಯ ಶಕ್ತಿಯಿಂದ ಅವನ ಪಾಪಗಳು ಕ್ಷಮಿಸಲ್ಪಡುತ್ತವೆ; ಇದು ಶಾಸ್ತ್ರಿಗಳನ್ನು ಕೆರಳಿಸುತ್ತದೆ. ಲೇವಿಯು ತನ್ನ ಸುಂಕದ ಕಟ್ಟೆಯನ್ನು ಬಿಟ್ಟುಬರುತ್ತಾನೆ.
5 1ಒಮ್ಮೆ, ನಮ್ಮ ತಂದೆಯ ವಾಕ್ಯವನ್ನು ಕೇಳಲು ಜನಸಮೂಹವು ಅವರ ಸುತ್ತಲೂ ನೂಕಾಡುತ್ತಿದ್ದಾಗ, ಯೇಸು ಗೆನ್ನೇಸರೇತ್ ಸರೋವರದ ಬಳಿ ನಿಂತಿದ್ದರು. a a v1 ಗೆನ್ನೇಸರೇತ್ ಸರೋವರವು ಗಲಿಲಾಯ ಸಮುದ್ರದ ಇನ್ನೊಂದು ಹೆಸರು. 2ಸರೋವರದ ಬಳಿ ನಿಂತಿದ್ದ ಎರಡು ದೋಣಿಗಳನ್ನು ಅವರು ಕಂಡರು; ಬೆಸ್ತರು ಅವುಗಳನ್ನು ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. 3ಅವರು ಸೀಮೋನನದಾಗಿದ್ದ ಒಂದು ದೋಣಿಯನ್ನು ಹತ್ತಿ, ದಡದಿಂದ ಸ್ವಲ್ಪ ದೂರ ಸಾಗಿಸುವಂತೆ ಅವನನ್ನು ಕೇಳಿಕೊಂಡು, ಕುಳಿತುಕೊಂಡು ದೋಣಿಯಿಂದ ಜನಸಮೂಹಗಳಿಗೆ ಬೋಧಿಸಿದರು.
4ಮಾತನಾಡುವುದನ್ನು ನಿಲ್ಲಿಸಿದ ಮೇಲೆ, ಅವರು ಸೀಮೋನನಿಗೆ, “ಆಳವಾದ ನೀರಿಗೆ ದೋಣಿ ನೂಕಿಕೊಂಡು ಹೋಗಿ, ಮೀನು ಹಿಡಿಯಲು ನಿಮ್ಮ ಬಲೆಗಳನ್ನು ಇಳಿಸಿರಿ,” ಎಂದರು.
5ಅದಕ್ಕೆ ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ದುಡಿದರೂ ಏನೂ ಸಿಗಲಿಲ್ಲ. ಆದರೆ ನಿಮ್ಮ ಮಾತಿನ ಮೇರೆಗೆ ನಾನು ಬಲೆಗಳನ್ನು ಇಳಿಸುತ್ತೇನೆ,” ಎಂದನು. 6ಹಾಗೆ ಮಾಡಿದಾಗ, ಅವರು ಎಷ್ಟೊಂದು ಮೀನುಗಳನ್ನು ಹಿಡಿದರೆಂದರೆ ಅವರ ಬಲೆಗಳು ಹರಿದುಹೋಗತೊಡಗಿದವು. 7ಅವರು ಸಹಾಯಕ್ಕೆ ಬರುವಂತೆ ಇನ್ನೊಂದು ದೋಣಿಯಲ್ಲಿದ್ದ ಪಾಲುಗಾರರಿಗೆ ಸನ್ನೆ ಮಾಡಿದರು; ಅವರು ಬಂದು ಎರಡೂ ದೋಣಿಗಳನ್ನು ತುಂಬಿಸಿದ್ದರಿಂದ ಅವು ಮುಳುಗತೊಡಗಿದವು. 8ಇದನ್ನು ಕಂಡು ಸೀಮೋನ ಪೇತ್ರನು ಯೇಸುವಿನ ಮೊಣಕಾಲಿಗೆ ಬಿದ್ದು, “ಪ್ರಭುವೇ, ನಾನು ಪಾಪಿಷ್ಠ ಮನುಷ್ಯ, ನನ್ನನ್ನು ಬಿಟ್ಟುಹೋಗಿ!” ಎಂದನು. 9ಏಕೆಂದರೆ ತಾವು ಹಿಡಿದ ಮೀನಿನ ರಾಶಿಗೆ ಅವನೂ ಅವನ ಸಂಗಡ ಇದ್ದವರೆಲ್ಲರೂ ವಿಸ್ಮಯಗೊಂಡಿದ್ದರು,
10ಅದೇ ರೀತಿ ಜೆಬೆದಾಯನ ಮಕ್ಕಳಾದ, ಸೀಮೋನನ ಪಾಲುಗಾರರಾಗಿದ್ದ ಯಾಕೋಬ ಮತ್ತು ಯೋಹಾನರೂ ವಿಸ್ಮಯಗೊಂಡಿದ್ದರು. ಆಗ ಯೇಸು ಸೀಮೋನನಿಗೆ, “ಹೆದರಬೇಡ; ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವೆ,” ಎಂದರು.
11ಆದ್ದರಿಂದ ಅವರು ತಮ್ಮ ದೋಣಿಗಳನ್ನು ದಡಕ್ಕೆ ಎಳೆದು, ಎಲ್ಲವನ್ನೂ ಬಿಟ್ಟು, ಅವರನ್ನು ಹಿಂಬಾಲಿಸಿದರು.
ಶುದ್ಧನಾದ ಒಬ್ಬ ಮನುಷ್ಯ
12ಯೇಸು ಒಂದು ಊರಿನಲ್ಲಿದ್ದಾಗ, ಘೋರ ಚರ್ಮರೋಗದಿಂದ ತುಂಬಿದ್ದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಯೇಸುವನ್ನು ಕಂಡು ಅವನು ಬೋರಲಾಗಿ ಬಿದ್ದು, “ಪ್ರಭುವೇ, ನಿಮಗೆ ಮನಸ್ಸಿದ್ದರೆ, ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದು ಬೇಡಿಕೊಂಡನು.
13ಯೇಸು ತಮ್ಮ ಕೈ ಚಾಚಿ, ಅವನನ್ನು ಮುಟ್ಟಿ, “ನನಗೆ ಮನಸ್ಸಿದೆ. ಶುದ್ಧನಾಗು,” ಎಂದರು. ಕೂಡಲೇ ಚರ್ಮರೋಗವು ಅವನನ್ನು ಬಿಟ್ಟುಹೋಯಿತು.
14ಯೇಸು ಅವನಿಗೆ ಯಾರಿಗೂ ಹೇಳಬೇಡವೆಂದು ಆಜ್ಞಾಪಿಸಿ, “ಆದರೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೋ; ಜನರಿಗೆ ಸಾಕ್ಷಿಯಾಗಿ, ನಿನ್ನ ಶುದ್ಧೀಕರಣಕ್ಕಾಗಿ ಮೋಶೆ ಆಜ್ಞಾಪಿಸಿದ್ದನ್ನು ಅರ್ಪಿಸು,” ಎಂದರು.
15ಆದರೆ ಅವರ ಕುರಿತಾದ ಸುದ್ದಿಯು ಇನ್ನೂ ಹೆಚ್ಚಾಗಿ ಹರಡಿತು; ದೊಡ್ಡ ಜನಸಮೂಹಗಳು ಅವರ ಮಾತನ್ನು ಕೇಳಲು ಮತ್ತು ತಮ್ಮ ರೋಗಗಳಿಂದ ಸ್ವಸ್ಥರಾಗಲು ಸೇರಿಬಂದರು. 16ಆದರೆ ಯೇಸು ಆಗಾಗ್ಗೆ ನಿರ್ಜನ ಸ್ಥಳಗಳಿಗೆ ಹೋಗಿ ಪ್ರಾರ್ಥಿಸುತ್ತಿದ್ದರು.
ಕ್ಷಮಿಸುವ ಪಿತನ ಶಕ್ತಿ
17ಒಂದು ದಿನ ಅವರು ಬೋಧಿಸುತ್ತಿದ್ದಾಗ, ಗಲಿಲಾಯದ ಪ್ರತಿಯೊಂದು ಹಳ್ಳಿಯಿಂದಲೂ ಯೂದಾಯ ಮತ್ತು ಯೆರೂಸಲೇಮಿನಿಂದಲೂ ಬಂದಿದ್ದ ಫರಿಸಾಯರೂ ಧರ್ಮಶಾಸ್ತ್ರ ಬೋಧಕರೂ ಕುಳಿತಿದ್ದರು. ರೋಗಿಗಳನ್ನು ಸ್ವಸ್ಥಪಡಿಸಲು ನಮ್ಮ ತಂದೆಯ ಶಕ್ತಿ ಅವರಲ್ಲಿತ್ತು. 18ಅಷ್ಟರಲ್ಲಿ, ಕೆಲವರು ಪಾರ್ಶ್ವವಾಯು ಪೀಡಿತನಾದ ಒಬ್ಬ ಮನುಷ್ಯನನ್ನು ಹಾಸಿಗೆಯ ಮೇಲೆ ಹೊತ್ತುಕೊಂಡು ಬಂದು, ಅವನನ್ನು ಒಳಗೆ ತಂದು ಯೇಸುವಿನ ಮುಂದೆ ಇಡಲು ಪ್ರಯತ್ನಿಸಿದರು. 19ಜನಸಮೂಹದ ನಡುವೆ ಅವನನ್ನು ಒಳಗೆ ತರಲು ದಾರಿ ಸಿಗದ ಕಾರಣ, ಅವರು ಮಾಳಿಗೆಯ ಮೇಲೆ ಹತ್ತಿ, ಹಂಚುಗಳ ಮೂಲಕ ಅವನನ್ನು ಅವನ ಹಾಸಿಗೆ ಸಹಿತ ನಡುವಿನಲ್ಲಿ, ಯೇಸುವಿನ ಎದುರಿಗೇ ಇಳಿಸಿದರು.
20ಯೇಸು ಅವರ ವಿಶ್ವಾಸವನ್ನು ಕಂಡು, “ಗೆಳೆಯಾ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ,” ಎಂದರು.
21ಆಗ ಶಾಸ್ತ್ರಿಗಳೂ ಫರಿಸಾಯರೂ, “ದೇವದೂಷಣೆ ಮಾಡುತ್ತಿರುವ ಈ ಮನುಷ್ಯ ಯಾರು? ದೇವರೊಬ್ಬರೇ ಹೊರತು ಪಾಪಗಳನ್ನು ಕ್ಷಮಿಸಲು ಯಾರಿಗೆ ಸಾಧ್ಯ?” ಎಂದು ವಾದಿಸತೊಡಗಿದರು.
22ಅವರ ಯೋಚನೆಗಳನ್ನು ತಿಳಿದ ಯೇಸು ಅವರಿಗೆ, “ನಿಮ್ಮ ಹೃದಯಗಳಲ್ಲಿ ನೀವು ಏಕೆ ತರ್ಕಿಸುತ್ತೀರಿ? 23‘ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೋ ಅಥವಾ ‘ಎದ್ದು ನಡೆ’ ಎಂದು ಹೇಳುವುದೋ — ಯಾವುದು ಸುಲಭ? 24ಆದರೆ ಭೂಮಿಯ ಮೇಲೆ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ನೀವು ತಿಳಿಯುವಂತೆ,” ಎಂದು ಹೇಳಿ — ಪಾರ್ಶ್ವವಾಯು ಪೀಡಿತನಿಗೆ — “ನಾನು ನಿನಗೆ ಹೇಳುತ್ತೇನೆ, ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು,” ಎಂದರು.
25ಕೂಡಲೇ ಅವನು ಅವರ ಮುಂದೆ ಎದ್ದುನಿಂತು, ತನ್ನ ಹಾಸಿಗೆಯನ್ನು ಎತ್ತಿಕೊಂಡು, ನಮ್ಮ ತಂದೆಯನ್ನು ಕೊಂಡಾಡುತ್ತಾ ಮನೆಗೆ ಹೋದನು. 26ಅವರೆಲ್ಲರನ್ನೂ ವಿಸ್ಮಯವು ಆವರಿಸಿತು; ಅವರು ಭಯಭಕ್ತಿಯಿಂದ ತುಂಬಿ ನಮ್ಮ ತಂದೆಯನ್ನು ಕೊಂಡಾಡುತ್ತಾ, “ಇಂದು ನಾವು ಅದ್ಭುತ ಕಾರ್ಯಗಳನ್ನು ಕಂಡೆವು,” ಎಂದರು.
ಯೇಸು ಲೇವಿಯನ್ನು ಕರೆಯುತ್ತಾರೆ
27ಇದಾದ ಮೇಲೆ ಯೇಸು ಹೊರಗೆ ಹೋಗಿ, ಸುಂಕದ ಕಟ್ಟೆಯ ಬಳಿ ಕುಳಿತಿದ್ದ ಲೇವಿ ಎಂಬ ಒಬ್ಬ ಸುಂಕದವನನ್ನು ಕಂಡು, “ನನ್ನನ್ನು ಹಿಂಬಾಲಿಸು,” ಎಂದರು.
28ಆಗ ಲೇವಿಯು ಎದ್ದು, ಎಲ್ಲವನ್ನೂ ಬಿಟ್ಟು, ಅವರನ್ನು ಹಿಂಬಾಲಿಸಿದನು. 29ಅನಂತರ ಲೇವಿಯು ತನ್ನ ಮನೆಯಲ್ಲಿ ಯೇಸುವಿಗಾಗಿ ದೊಡ್ಡ ಔತಣವನ್ನು ಏರ್ಪಡಿಸಿದನು; ಸುಂಕದವರ ಮತ್ತು ಇತರರ ದೊಡ್ಡ ಗುಂಪೊಂದು ಅವರ ಸಂಗಡ ಊಟಕ್ಕೆ ಕುಳಿತಿತ್ತು. 30ಆದರೆ ಫರಿಸಾಯರೂ ಅವರ ಶಾಸ್ತ್ರಿಗಳೂ ಅವರ ಶಿಷ್ಯರ ಮೇಲೆ, “ಸುಂಕದವರ ಮತ್ತು ಪಾಪಿಗಳ ಸಂಗಡ ನೀವು ಏಕೆ ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ?” ಎಂದು ಗೊಣಗಿದರು.
31ಅದಕ್ಕೆ ಯೇಸು, “ವೈದ್ಯನ ಅಗತ್ಯ ಇರುವುದು ಆರೋಗ್ಯವಂತರಿಗಲ್ಲ, ರೋಗಿಗಳಿಗೆ. 32ನಾನು ನ್ಯಾಯವಂತರನ್ನು ಕರೆಯಲು ಬಂದಿಲ್ಲ, ಪಾಪಿಗಳನ್ನು ಪಶ್ಚಾತ್ತಾಪಕ್ಕೆ ಕರೆಯಲು ಬಂದಿದ್ದೇನೆ,” ಎಂದರು.
ಉಪವಾಸದ ಕುರಿತು ಒಂದು ಪ್ರಶ್ನೆ
33ಅವರು ಅವರಿಗೆ, “ಯೋಹಾನನ ಶಿಷ್ಯರು ಆಗಾಗ್ಗೆ ಉಪವಾಸ ಮಾಡಿ ಪ್ರಾರ್ಥಿಸುತ್ತಾರೆ, ಅದೇ ರೀತಿ ಫರಿಸಾಯರ ಶಿಷ್ಯರೂ; ಆದರೆ ನಿಮ್ಮವರು ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ,” ಎಂದರು.
34ಅದಕ್ಕೆ ಯೇಸು, “ಮದುಮಗನು ತನ್ನ ಗೆಳೆಯರ ಸಂಗಡ ಇರುವಾಗ ಅವರಿಂದ ಉಪವಾಸ ಮಾಡಿಸಲು ನಿಮಗೆ ಸಾಧ್ಯವೇ? 35ಆದರೆ ಮದುಮಗನನ್ನು ಅವರಿಂದ ತೆಗೆದುಕೊಳ್ಳುವ ದಿನಗಳು ಬರುತ್ತವೆ; ಆಗ, ಆ ದಿನಗಳಲ್ಲಿ, ಅವರು ಉಪವಾಸ ಮಾಡುವರು,” ಎಂದರು.
36ಅವರು ಅವರಿಗೆ ಒಂದು ಸಾಮ್ಯವನ್ನೂ ಹೇಳಿದರು: “ಯಾರೂ ಹೊಸ ಬಟ್ಟೆಯಿಂದ ತುಂಡನ್ನು ಹರಿದು ಅದನ್ನು ಹಳೆಯ ಬಟ್ಟೆಗೆ ಹೊಲಿಯುವುದಿಲ್ಲ. ಇಲ್ಲವಾದರೆ, ಅವನು ಹೊಸ ಬಟ್ಟೆಯನ್ನು ಹರಿಯುತ್ತಾನೆ, ಮತ್ತು ಹೊಸ ತುಂಡು ಹಳೆಯದಕ್ಕೆ ಹೊಂದುವುದಿಲ್ಲ. 37ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ದ್ರಾಕ್ಷಾರಸದ ಚೀಲಗಳಲ್ಲಿ ಹಾಕುವುದಿಲ್ಲ; ಇಲ್ಲವಾದರೆ ಹೊಸ ದ್ರಾಕ್ಷಾರಸವು ಚೀಲಗಳನ್ನು ಒಡೆದು, ಹೊರಗೆ ಚೆಲ್ಲಿ, ಚೀಲಗಳೂ ಹಾಳಾಗುತ್ತವೆ. 38ಹೊಸ ದ್ರಾಕ್ಷಾರಸವನ್ನು ಹೊಸ ಚೀಲಗಳಲ್ಲೇ ಹಾಕಬೇಕು. 39ಹಳೆಯ ದ್ರಾಕ್ಷಾರಸವನ್ನು ಕುಡಿದ ಯಾರೂ ಹೊಸದನ್ನು ಬಯಸುವುದಿಲ್ಲ; ಏಕೆಂದರೆ, ‘ಹಳೆಯದೇ ಒಳ್ಳೆಯದು’ ಎಂದು ಅವನು ಹೇಳುತ್ತಾನೆ,” ಎಂದರು.