ಕೊನೆಯ ಏಳು ಉಪದ್ರವಗಳು
ಮೃಗವನ್ನು ನಿರಾಕರಿಸಿದವರು ಗಾಜಿನ ಸಮುದ್ರದ ಬಳಿ ನಿಂತು ಮೋಶೆಯ ಹಾಡನ್ನೂ ಕುರಿಮರಿಯ ಹಾಡನ್ನೂ ಹಾಡುತ್ತಾ, ನಮ್ಮ ತಂದೆಯ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ ಎನ್ನುತ್ತಾರೆ. ಏಳು ದೂತರು ಹೊಳೆಯುವ ನಾರುಮಡಿಯನ್ನು ಧರಿಸಿ ಏಳು ಪಾತ್ರೆಗಳೊಂದಿಗೆ ಹೊರಬರುತ್ತಾರೆ, ಮತ್ತು ಅವು ಸುರಿಯಲ್ಪಡುವವರೆಗೆ ಯಾರೂ ಪ್ರವೇಶಿಸಲಾಗದಂತೆ ದೇವಾಲಯವು ಹೊಗೆಯಿಂದ ತುಂಬುತ್ತದೆ.
15 1ಅನಂತರ ಸ್ವರ್ಗದಲ್ಲಿ ಮಹತ್ತರವೂ ಅದ್ಭುತಕರವೂ ಆದ ಮತ್ತೊಂದು ಸೂಚಕವನ್ನು ನಾನು ಕಂಡೆನು: ಕೊನೆಯ ಏಳು ಉಪದ್ರವಗಳನ್ನು ಹಿಡಿದಿದ್ದ ಏಳು ಮಂದಿ ದೂತರನ್ನು ಕಂಡೆನು; ಏಕೆಂದರೆ ಅವುಗಳಲ್ಲಿ ನಮ್ಮ ತಂದೆಯ ಕೋಪವು ಮುಕ್ತಾಯಗೊಂಡಿತು.
2ಬೆಂಕಿ ಬೆರೆತ ಗಾಜಿನ ಸಮುದ್ರದಂತೆ ತೋರುತ್ತಿದ್ದ ಒಂದನ್ನು ನಾನು ಕಂಡೆನು; ಆ ಮೃಗವನ್ನೂ ಅದರ ವಿಗ್ರಹವನ್ನೂ ಅದರ ಹೆಸರಿನ ಸಂಖ್ಯೆಯನ್ನೂ ಜಯಿಸಿದವರು ನಮ್ಮ ತಂದೆಯಿಂದ ಬಂದ ವೀಣೆಗಳನ್ನು ಹಿಡಿದುಕೊಂಡು ಅದರ ಬಳಿ ನಿಂತಿದ್ದರು. 3ನಮ್ಮ ತಂದೆಯ ಸೇವಕನಾದ ಮೋಶೆಯ ಗೀತೆಯನ್ನೂ ಕುರಿಮರಿಯಾದ ಯೇಸುವಿನ ಗೀತೆಯನ್ನೂ ಅವರು ಹಾಡಿದರು: “ಸರ್ವಶಕ್ತ ಸಾರ್ವಭೌಮ ತಂದೆಯೇ, ನಿಮ್ಮ ಕಾರ್ಯಗಳು ಮಹತ್ತರವೂ ಅದ್ಭುತಕರವೂ ಆಗಿವೆ; ಜನಾಂಗಗಳ ರಾಜನೇ, ನಿಮ್ಮ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ. 4ಓ ತಂದೆಯೇ, ನಿಮಗೆ ಭಯಪಡದೆ ನಿಮ್ಮ ನಾಮವನ್ನು ಮಹಿಮೆಪಡಿಸದವರು ಯಾರಿದ್ದಾರೆ? ನೀವೊಬ್ಬರೇ ಪರಿಶುದ್ಧರು. ಎಲ್ಲಾ ಜನಾಂಗಗಳು ಬಂದು ನಿಮ್ಮ ಮುಂದೆ ಆರಾಧಿಸುವರು; ಏಕೆಂದರೆ ನಿಮ್ಮ ನ್ಯಾಯನೀತಿಯ ಕಾರ್ಯಗಳು ಪ್ರಕಟಗೊಂಡಿವೆ.”
5ಇದಾದ ಮೇಲೆ ನಾನು ನೋಡಲಾಗಿ, ಸ್ವರ್ಗದಲ್ಲಿ ಸಾಕ್ಷಿಯ ಗುಡಾರವಾದ ದೇವಾಲಯವು ತೆರೆಯಲ್ಪಟ್ಟಿತು. 6ಆ ಏಳು ಉಪದ್ರವಗಳನ್ನು ಹಿಡಿದಿದ್ದ ಏಳು ಮಂದಿ ದೂತರು ನಿರ್ಮಲವೂ ಪ್ರಕಾಶಮಾನವೂ ಆದ ನಾರುಮಡಿಯನ್ನು ಧರಿಸಿಕೊಂಡು, ಎದೆಗೆ ಚಿನ್ನದ ಪಟ್ಟಿಗಳನ್ನು ಕಟ್ಟಿಕೊಂಡು, ದೇವಾಲಯದಿಂದ ಹೊರಗೆ ಬಂದರು.
7ಆಗ ಆ ನಾಲ್ಕು ಜೀವಿಗಳಲ್ಲಿ ಒಬ್ಬನು, ಯುಗಯುಗಾಂತರಗಳಲ್ಲಿಯೂ ಜೀವಿಸುವ ನಮ್ಮ ತಂದೆಯ ಕೋಪದಿಂದ ತುಂಬಿದ್ದ ಏಳು ಚಿನ್ನದ ಬಟ್ಟಲುಗಳನ್ನು ಆ ಏಳು ಮಂದಿ ದೂತರಿಗೆ ಕೊಟ್ಟನು. 8ನಮ್ಮ ತಂದೆಯ ಮಹಿಮೆಯಿಂದಲೂ ಅವರ ಶಕ್ತಿಯಿಂದಲೂ ಹೊರಟ ಹೊಗೆಯು ದೇವಾಲಯವನ್ನು ತುಂಬಿಕೊಂಡಿತು; ಆ ಏಳು ಮಂದಿ ದೂತರ ಏಳು ಉಪದ್ರವಗಳು ಮುಗಿಯುವ ತನಕ ಯಾರೂ ಅದರೊಳಗೆ ಪ್ರವೇಶಿಸಲಾರದೆ ಇದ್ದರು.