ಸಂಪ್ರದಾಯ ವಿರುದ್ಧ ಪಿತನ ವಾಕ್ಯ
ನಿಮ್ಮ ಸಂಪ್ರದಾಯವು ತಂದೆಯ ಸ್ವಂತ ಆಜ್ಞೆಯನ್ನೇ ರದ್ದುಮಾಡಿದೆ, ಮತ್ತು ಅಶುದ್ಧಗೊಳಿಸುವುದು ಬಾಯೊಳಗೆ ಹೋಗುವುದಲ್ಲ, ಹೃದಯದಿಂದ ಹೊರಬರುವುದು ಎಂದು ಯೇಸು ಫರಿಸಾಯರಿಗೆ ಹೇಳುತ್ತಾನೆ. ಒಬ್ಬ ಕಾನಾನ್ಯ ಸ್ತ್ರೀ ಹಿಂದಿರುಗಲು ಒಪ್ಪದೆ, ಅವನಿಗೆ ಮರುಉತ್ತರ ಕೊಡುತ್ತಾಳೆ, ಮತ್ತು ಪೀಡಿತಳಾದ ಅವಳ ಮಗಳು ಸ್ವಸ್ಥಳಾಗುತ್ತಾಳೆ.
15 1ಆಗ ಫರಿಸಾಯರೂ ಶಾಸ್ತ್ರಿಗಳೂ ಯೆರೂಸಲೇಮಿನಿಂದ ಯೇಸುವಿನ ಬಳಿಗೆ ಬಂದು ಹೀಗೆ ಕೇಳಿದರು: 2“ನಿಮ್ಮ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಮೀರುತ್ತಾರೆ? ಊಟಮಾಡುವಾಗ ಅವರು ಕೈ ತೊಳೆದುಕೊಳ್ಳುವುದಿಲ್ಲ.”
3ಅದಕ್ಕೆ ಅವರು ಉತ್ತರಿಸಿ ಹೀಗೆಂದರು: “ನೀವೂ ನಿಮ್ಮ ಸಂಪ್ರದಾಯಕ್ಕಾಗಿ ನಮ್ಮ ತಂದೆಯ ಆಜ್ಞೆಯನ್ನು ಏಕೆ ಮೀರುತ್ತೀರಿ? 4ಏಕೆಂದರೆ ನಮ್ಮ ತಂದೆ, ‘ನಿನ್ನ ತಂದೆತಾಯಿಗಳನ್ನು ಸನ್ಮಾನಿಸು,’ ಎಂತಲೂ ‘ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನನ್ನು ಖಂಡಿತವಾಗಿ ಕೊಲ್ಲಬೇಕು,’ ಎಂತಲೂ ಹೇಳಿದ್ದಾರೆ. 5ಆದರೆ ನೀವು ಹೀಗೆ ಹೇಳುತ್ತೀರಿ: ‘ಯಾರಾದರೂ ತನ್ನ ತಂದೆಗಾಗಲಿ ತಾಯಿಗಾಗಲಿ, “ನಿನಗೆ ನನ್ನಿಂದ ಸಿಗಬೇಕಾಗಿದ್ದದ್ದೆಲ್ಲಾ ನಮ್ಮ ತಂದೆಗೆ ಅರ್ಪಿತವಾದ ಕಾಣಿಕೆ,” ಎಂದು ಹೇಳಿದರೆ, 6ಅವನು ಅದರಿಂದ ತನ್ನ ತಂದೆಯನ್ನು ಸನ್ಮಾನಿಸಬೇಕಾಗಿಲ್ಲ.’ ಹೀಗೆ ನಿಮ್ಮ ಸಂಪ್ರದಾಯಕ್ಕಾಗಿ ನಮ್ಮ ತಂದೆಯ ವಾಕ್ಯವನ್ನು ನೀವು ರದ್ದುಗೊಳಿಸಿದ್ದೀರಿ. 7ಕಪಟಿಗಳೇ! ಯೆಶಾಯನು ನಿಮ್ಮ ವಿಷಯದಲ್ಲಿ ಸರಿಯಾಗಿ ಪ್ರವಾದಿಸಿ ಹೀಗೆ ಹೇಳಿದ್ದಾನೆ: 8‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಹೃದಯ ನನ್ನಿಂದ ದೂರವಾಗಿದೆ; 9ಅವರು ನನ್ನನ್ನು ವ್ಯರ್ಥವಾಗಿ ಆರಾಧಿಸುತ್ತಾರೆ, ಮನುಷ್ಯರ ಆಜ್ಞೆಗಳನ್ನು ಉಪದೇಶವೆಂದು ಬೋಧಿಸುತ್ತಾರೆ.’ ”
10ಆಗ ಅವರು ಜನಸಮೂಹವನ್ನು ತಮ್ಮ ಬಳಿಗೆ ಕರೆದು ಹೀಗೆಂದರು: “ಕೇಳಿ, ಅರ್ಥಮಾಡಿಕೊಳ್ಳಿ: 11ಬಾಯೊಳಗೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧಗೊಳಿಸುವುದಿಲ್ಲ, ಬದಲಾಗಿ ಬಾಯಿಂದ ಹೊರಬರುವಂಥದ್ದೇ ಮನುಷ್ಯನನ್ನು ಅಶುದ್ಧಗೊಳಿಸುತ್ತದೆ.”
12ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಮಾತನ್ನು ಕೇಳಿ ಫರಿಸಾಯರು ಬೇಸರಗೊಂಡರೆಂದು ನಿಮಗೆ ಗೊತ್ತೋ?” ಎಂದು ಕೇಳಿದರು.
13ಅದಕ್ಕೆ ಅವರು ಹೀಗೆಂದರು: “ಸ್ವರ್ಗದಲ್ಲಿರುವ ನನ್ನ ತಂದೆ ನೆಡದಿರುವ ಪ್ರತಿಯೊಂದು ಗಿಡವೂ ಬೇರುಸಹಿತ ಕಿತ್ತುಹಾಕಲ್ಪಡುವುದು. 14ಅವರನ್ನು ಬಿಟ್ಟುಬಿಡಿ; ಅವರು ಕುರುಡ ಮಾರ್ಗದರ್ಶಕರು. ಕುರುಡನು ಕುರುಡನಿಗೆ ದಾರಿ ತೋರಿಸಿದರೆ, ಇಬ್ಬರೂ ಗುಂಡಿಯಲ್ಲಿ ಬೀಳುವರು.”
15ಅದಕ್ಕೆ ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸಿರಿ,” ಎಂದು ಕೇಳಿದನು.
16ಅದಕ್ಕೆ ಯೇಸು, “ನೀವೂ ಇನ್ನೂ ಉಳಿದವರಂತೆ ಬುದ್ಧಿಹೀನರಾಗಿದ್ದೀರಾ?” ಎಂದರು. 17“ಬಾಯೊಳಗೆ ಹೋಗುವಂಥದ್ದೆಲ್ಲಾ ಹೊಟ್ಟೆಯೊಳಗೆ ಸೇರಿ ಬಳಿಕ ಹೊರಕ್ಕೆ ವಿಸರ್ಜಿಸಲ್ಪಡುತ್ತದೆ ಎಂದು ನಿಮಗೆ ಅರ್ಥವಾಗುವುದಿಲ್ಲವೇ? 18ಆದರೆ ಬಾಯಿಂದ ಹೊರಬರುವಂಥದ್ದು ಹೃದಯದಿಂದ ಬರುತ್ತದೆ, ಅದೇ ಮನುಷ್ಯನನ್ನು ಅಶುದ್ಧಗೊಳಿಸುತ್ತದೆ. 19ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು ಹುಟ್ಟುತ್ತವೆ: ಕೊಲೆ, ವ್ಯಭಿಚಾರ, ಲೈಂಗಿಕ ಪಾಪ, ಕಳ್ಳತನ, ಸುಳ್ಳುಸಾಕ್ಷಿ, ಚಾಡಿ. 20ಇವೇ ಮನುಷ್ಯನನ್ನು ಅಶುದ್ಧಗೊಳಿಸುತ್ತವೆ; ಆದರೆ ತೊಳೆಯದ ಕೈಗಳಿಂದ ಊಟಮಾಡುವುದು ಯಾರನ್ನೂ ಅಶುದ್ಧಗೊಳಿಸುವುದಿಲ್ಲ.”
ಒಬ್ಬ ಸ್ತ್ರೀಯ ಪಟ್ಟುಬಿಡದ ವಿಶ್ವಾಸ
21ಯೇಸು ಆ ಸ್ಥಳವನ್ನು ಬಿಟ್ಟು ತೂರ್ ಮತ್ತು ಸೀದೋನ್ ಪ್ರಾಂತ್ಯಕ್ಕೆ ಹೊರಟುಹೋದರು. 22ಆ ಪ್ರಾಂತ್ಯದ ಒಬ್ಬ ಕಾನಾನ್ಯ ಸ್ತ್ರೀ ಬಂದು, “ಪ್ರಭುವೇ, ದಾವೀದನ ಕುಮಾರನೇ, ನನ್ನ ಮೇಲೆ ಕರುಣೆ ತೋರಿಸಿ! ನನ್ನ ಮಗಳು ದೆವ್ವದಿಂದ ಕಠಿಣವಾಗಿ ಬಾಧೆಪಡುತ್ತಿದ್ದಾಳೆ,” ಎಂದು ಕೂಗಿದಳು.
23ಯೇಸು ಆಕೆಗೆ ಏನೂ ಉತ್ತರ ಕೊಡಲಿಲ್ಲ. ಆಗ ಅವರ ಶಿಷ್ಯರು ಬಂದು, “ಆಕೆಯನ್ನು ಕಳುಹಿಸಿಬಿಡಿ; ಆಕೆ ನಮ್ಮ ಹಿಂದೆ ಕೂಗುತ್ತಲೇ ಇದ್ದಾಳೆ,” ಎಂದು ಒತ್ತಾಯಿಸಿದರು.
24ಅದಕ್ಕೆ ಅವರು, “ಇಸ್ರಾಯೇಲ್ ಮನೆತನದ ಕಳೆದುಹೋದ ಕುರಿಗಳ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ,” ಎಂದು ಉತ್ತರಿಸಿದರು.
25ಆದರೆ ಆಕೆ ಬಂದು ಅವರ ಮುಂದೆ ಮೊಣಕಾಲೂರಿ, “ಪ್ರಭುವೇ, ನನಗೆ ಸಹಾಯ ಮಾಡಿ!” ಎಂದಳು.
26ಅದಕ್ಕೆ ಅವರು, “ಮಕ್ಕಳ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವುದು ಸರಿಯಲ್ಲ,” ಎಂದರು.
27ಅದಕ್ಕೆ ಆಕೆ, “ಹೌದು ಪ್ರಭುವೇ, ಆದರೂ ನಾಯಿಗಳು ಸಹ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ಚೂರುಗಳನ್ನು ತಿನ್ನುತ್ತವೆ,” ಎಂದಳು.
28ಅದಕ್ಕೆ ಯೇಸು, “ಅಮ್ಮಾ, ನಿನ್ನ ವಿಶ್ವಾಸ ದೊಡ್ಡದು. ನೀನು ಬಯಸಿದಂತೆಯೇ ಆಗಲಿ,” ಎಂದರು. ಅದೇ ಗಳಿಗೆಯಿಂದ ಆಕೆಯ ಮಗಳು ಗುಣಹೊಂದಿದಳು.
ಪಿತನು ನಾಲ್ಕು ಸಾವಿರ ಜನರಿಗೆ ಊಟ ನೀಡಿದರು
29ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಬಳಿ ಬಂದು, ಬೆಟ್ಟವನ್ನೇರಿ ಅಲ್ಲಿ ಕುಳಿತುಕೊಂಡರು. 30ದೊಡ್ಡ ಜನಸಮೂಹಗಳು ಕುಂಟರು, ಕುರುಡರು, ಅಂಗವಿಕಲರು, ಮೂಕರು ಹಾಗೂ ಇನ್ನೂ ಅನೇಕರನ್ನು ಕರೆದುಕೊಂಡು ಅವರ ಬಳಿಗೆ ಬಂದು, ಅವರನ್ನು ಯೇಸುವಿನ ಪಾದಗಳ ಬಳಿ ಇಟ್ಟರು; ಯೇಸು ಅವರನ್ನು ಗುಣಪಡಿಸಿದರು. 31ಮೂಕರು ಮಾತನಾಡುವುದನ್ನೂ ಅಂಗವಿಕಲರು ಗುಣಹೊಂದುವುದನ್ನೂ ಕುಂಟರು ನಡೆಯುವುದನ್ನೂ ಕುರುಡರು ನೋಡುವುದನ್ನೂ ಕಂಡು ಜನಸಮೂಹವು ಆಶ್ಚರ್ಯಪಟ್ಟು, ಇಸ್ರಾಯೇಲಿನ ಪಿತನನ್ನು ಮಹಿಮೆಪಡಿಸಿದರು.
32ಯೇಸು ತಮ್ಮ ಶಿಷ್ಯರನ್ನು ಬಳಿಗೆ ಕರೆದು, “ಈ ಜನಸಮೂಹದ ಮೇಲೆ ನನಗೆ ಕನಿಕರವಾಗುತ್ತದೆ; ಇವರು ಆಗಲೇ ಮೂರು ದಿನಗಳಿಂದ ನನ್ನ ಸಂಗಡ ಇದ್ದಾರೆ, ತಿನ್ನಲು ಏನೂ ಇಲ್ಲ. ಇವರನ್ನು ಹಸಿವಿನಿಂದ ಕಳುಹಿಸಲು ನನಗೆ ಮನಸ್ಸಿಲ್ಲ; ಒಂದುವೇಳೆ ದಾರಿಯಲ್ಲಿ ಇವರು ಬಳಲಿಹೋದಾರು,” ಎಂದರು.
33ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಜನಸಮೂಹಕ್ಕೆ ಊಟ ನೀಡುವಷ್ಟು ರೊಟ್ಟಿ ಈ ನಿರ್ಜನ ಪ್ರದೇಶದಲ್ಲಿ ನಮಗೆ ಎಲ್ಲಿ ಸಿಕ್ಕೀತು?” ಎಂದು ಕೇಳಿದರು.
34ಅದಕ್ಕೆ ಯೇಸು, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದರು. ಅವರು, “ಏಳು, ಮತ್ತು ಕೆಲವು ಸಣ್ಣ ಮೀನುಗಳಿವೆ,” ಎಂದರು.
35ಆಗ ಯೇಸು ಜನಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದರು. 36ಅವರು ಆ ಏಳು ರೊಟ್ಟಿಗಳನ್ನೂ ಮೀನುಗಳನ್ನೂ ತೆಗೆದುಕೊಂಡು, ಸ್ತೋತ್ರಸಲ್ಲಿಸಿ, ಮುರಿದು, ಶಿಷ್ಯರಿಗೆ ಕೊಟ್ಟರು; ಶಿಷ್ಯರು ಜನಸಮೂಹಗಳಿಗೆ ಕೊಟ್ಟರು. 37ಎಲ್ಲರೂ ತಿಂದು ತೃಪ್ತರಾದರು; ಉಳಿದ ಚೂರುಗಳನ್ನು ಅವರು ಏಳು ಬುಟ್ಟಿ ತುಂಬ ಕೂಡಿಸಿದರು. 38ತಿಂದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ 4,000 ಪುರುಷರಾಗಿದ್ದರು. 39ಜನಸಮೂಹಗಳನ್ನು ಕಳುಹಿಸಿದ ಬಳಿಕ ಯೇಸು ದೋಣಿಯನ್ನು ಹತ್ತಿ ಮಗದಾನ್ ಪ್ರಾಂತ್ಯಕ್ಕೆ ಹೋದರು.