ಆಕಾಶದಿಂದ ಸೂಚಕಕಾರ್ಯವನ್ನು ಬೇಡಿದ್ದು
ಪೇತ್ರನು ಅವನನ್ನು ಕ್ರಿಸ್ತನು, ಜೀವಸ್ವರೂಪನಾದ ತಂದೆಯ ಮಗನು ಎಂದು ಹೇಳುತ್ತಾನೆ; ಕೆಲವೇ ಕ್ಷಣಗಳಲ್ಲಿ, ಈ ಕ್ರಿಸ್ತನು ಕೊಲ್ಲಲ್ಪಡಬೇಕು ಎಂಬುದನ್ನು ಕೇಳಲು ಒಪ್ಪದ್ದಕ್ಕಾಗಿ ಸೈತಾನ ಎಂದು ಕರೆಯಲ್ಪಡುತ್ತಾನೆ. ಹಿಂಬಾಲಿಸುವುದೆಂದರೆ ನಿನ್ನನ್ನು ನೀನೇ ನಿರಾಕರಿಸಿ ಶಿಲುಬೆಯನ್ನು ಹೊರುವುದು, ಅದರಿಂದ ತಪ್ಪಿಸಲ್ಪಡುವುದಲ್ಲ ಎಂದು ಯೇಸು ಹೇಳುತ್ತಾನೆ.
16 1ಫರಿಸಾಯರೂ ಸದ್ದುಕಾಯರೂ ಯೇಸುವನ್ನು ಪರೀಕ್ಷಿಸಲು ಬಂದು, ಆಕಾಶದಿಂದ ಒಂದು ಸೂಚಕಕಾರ್ಯವನ್ನು ತಮಗೆ ತೋರಿಸಬೇಕೆಂದು ಕೇಳಿದರು.
2ಅದಕ್ಕೆ ಯೇಸು ಉತ್ತರವಾಗಿ ಹೀಗೆಂದರು: “ಸಂಜೆಯಾದಾಗ, ‘ಆಕಾಶ ಕೆಂಪಾಗಿದೆ, ಆದ್ದರಿಂದ ಹವಾಮಾನ ತಿಳಿಯಾಗಿರುವುದು’ ಎಂದು ನೀವು ಹೇಳುತ್ತೀರಿ.
3“ಬೆಳಿಗ್ಗೆ, ‘ಆಕಾಶ ಕೆಂಪಾಗಿ ಮಂಕಾಗಿದೆ, ಆದ್ದರಿಂದ ಈ ದಿನ ಬಿರುಗಾಳಿ’ ಎಂದು ಹೇಳುತ್ತೀರಿ. ಆಕಾಶದ ಮುಖವನ್ನು ಓದಲು ನಿಮಗೆ ತಿಳಿದಿದೆ, ಆದರೆ ಕಾಲದ ಸೂಚನೆಗಳನ್ನು ಓದಲಾರಿರಿ.
4“ಕೆಟ್ಟ, ನಂಬಿಗೆಯಿಲ್ಲದ ಸಂತತಿ ಸೂಚಕಕಾರ್ಯವನ್ನು ಹುಡುಕುತ್ತದೆ; ಯೋನನ ಸೂಚಕಕಾರ್ಯವೊಂದನ್ನು ಬಿಟ್ಟರೆ ಬೇರೆ ಯಾವ ಸೂಚಕವೂ ಕೊಡಲ್ಪಡುವುದಿಲ್ಲ.” ಆಮೇಲೆ ಅವರನ್ನು ಬಿಟ್ಟು ಹೊರಟುಹೋದರು.
ಸುಳ್ಳು ಬೋಧನೆಯ ಹುಳಿ
5ಶಿಷ್ಯರು ಆಚೆ ದಡಕ್ಕೆ ದಾಟಿದಾಗ, ರೊಟ್ಟಿಯನ್ನು ತರಲು ಮರೆತಿದ್ದರು.
6ಯೇಸು ಅವರಿಗೆ, “ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯದಲ್ಲಿ ಎಚ್ಚರವಾಗಿದ್ದು ಜಾಗ್ರತೆಯಿಂದಿರಿ” ಎಂದರು.
7ಅವರು ತಮ್ಮತಮ್ಮೊಳಗೆ ಇದನ್ನು ಚರ್ಚಿಸಿ, “ನಾವು ರೊಟ್ಟಿಯನ್ನು ತರಲಿಲ್ಲದ ಕಾರಣವೇ ಇದು” ಎಂದರು.
8ಇದನ್ನು ಅರಿತು ಯೇಸು ಹೀಗೆಂದರು: “ಅಲ್ಪವಿಶ್ವಾಸಿಗಳೇ, ನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ತಮ್ಮತಮ್ಮೊಳಗೆ ಏಕೆ ಚರ್ಚಿಸುತ್ತೀರಿ? 9ಇನ್ನೂ ನಿಮಗೆ ತಿಳಿಯಲಿಲ್ಲವೇ? 5,000 ಜನರಿಗೆ ಹಂಚಿದ ಐದು ರೊಟ್ಟಿಗಳನ್ನೂ, ನೀವು ಎಷ್ಟು ಪುಟ್ಟಿ ಕೂಡಿಸಿದಿರಿ ಎಂಬುದನ್ನೂ ನೆನಪಿಗೆ ತಂದುಕೊಳ್ಳುವುದಿಲ್ಲವೇ?
10“ಇಲ್ಲವೆ 4,000 ಜನರಿಗೆ ಹಂಚಿದ ಏಳು ರೊಟ್ಟಿಗಳನ್ನೂ, ನೀವು ಎಷ್ಟು ಪುಟ್ಟಿ ಒಟ್ಟುಗೂಡಿಸಿದಿರಿ ಎಂಬುದನ್ನೂ ನೆನಪಿಗೆ ತಂದುಕೊಳ್ಳುವುದಿಲ್ಲವೇ?
11“ನಾನು ರೊಟ್ಟಿಯ ವಿಷಯವಾಗಿ ನಿಮ್ಮೊಡನೆ ಮಾತನಾಡಲಿಲ್ಲವೆಂದು ನಿಮಗೆ ಏಕೆ ತಿಳಿಯುವುದಿಲ್ಲ? ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯದಲ್ಲಿ ಎಚ್ಚರವಾಗಿರಿ.”
12ಆಗ, ರೊಟ್ಟಿಯ ಹುಳಿಯ ವಿಷಯದಲ್ಲಿ ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ಜಾಗ್ರತೆಯಾಗಿರಬೇಕೆಂದು ಹೇಳಿದರೆಂದು ಅವರು ಗ್ರಹಿಸಿಕೊಂಡರು.
ಪಿತನ ಪುತ್ರನೆಂದು ಪೇತ್ರನ ಅರಿಕೆ
13ಯೇಸು ಕೈಸರೈಯ ಫಿಲಿಪ್ಪಿಯ ಪ್ರಾಂತ್ಯಕ್ಕೆ ಬಂದು, ತಮ್ಮ ಶಿಷ್ಯರನ್ನು, “ನರಪುತ್ರನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದರು.
14ಅದಕ್ಕೆ ಅವರು, “ಕೆಲವರು ಸ್ನಾನಿಕ ಯೋಹಾನನು ಎನ್ನುತ್ತಾರೆ, ಬೇರೆ ಕೆಲವರು ಎಲೀಯನು, ಇನ್ನೂ ಕೆಲವರು ಯೆರೆಮೀಯನು ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಎನ್ನುತ್ತಾರೆ” ಎಂದರು.
15ಅದಕ್ಕೆ ಅವರು, “ಆದರೆ ನಾನು ಯಾರೆಂದು ನೀವು ಹೇಳುತ್ತೀರಿ?” ಎಂದು ಅವರನ್ನು ಕೇಳಿದರು.
16ಅದಕ್ಕೆ ಸೀಮೋನ ಪೇತ್ರನು, “ನೀವೇ ಕ್ರಿಸ್ತನು, ಜೀವಸ್ವರೂಪ ಪಿತನ ಪುತ್ರನು” ಎಂದನು.
17ಅದಕ್ಕೆ ಯೇಸು, “ಯೋನನ ಮಗನಾದ ಸೀಮೋನನೇ, ನೀನು ಧನ್ಯನು—ಇದನ್ನು ನಿನಗೆ ತಿಳಿಸಿಕೊಟ್ಟದ್ದು ರಕ್ತಮಾಂಸವಲ್ಲ, ಸ್ವರ್ಗದಲ್ಲಿರುವ ನನ್ನ ತಂದೆಯೇ.
18“ನಾನು ನಿನಗೆ ಹೇಳುವುದೇನೆಂದರೆ: ನೀನು ಪೇತ್ರನು, ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಪಾತಾಳದ ಬಾಗಿಲುಗಳು ಅದನ್ನು ಜಯಿಸಲಾರವು.
19“ನಮ್ಮ ತಂದೆಯ ಸಾಮ್ರಾಜ್ಯದ ಬೀಗದ ಕೈಗಳನ್ನು ನಾನು ನಿನಗೆ ಕೊಡುವೆನು; ನೀನು ಭೂಮಿಯ ಮೇಲೆ ಯಾವುದನ್ನು ಕಟ್ಟುವಿಯೋ ಅದು ಸ್ವರ್ಗದಲ್ಲಿ ಕಟ್ಟಲ್ಪಟ್ಟಿರುವುದು, ಭೂಮಿಯ ಮೇಲೆ ಯಾವುದನ್ನು ಬಿಚ್ಚುವಿಯೋ ಅದು ಸ್ವರ್ಗದಲ್ಲಿ ಬಿಚ್ಚಲ್ಪಟ್ಟಿರುವುದು.”
20ಆಗ, ತಾವು ಕ್ರಿಸ್ತನೆಂದು ಯಾರಿಗೂ ಹೇಳಬಾರದೆಂದು ಶಿಷ್ಯರಿಗೆ ಖಂಡಿತವಾಗಿ ಆಜ್ಞಾಪಿಸಿದರು.
ಪುತ್ರನು ಕಷ್ಟಪಟ್ಟು ಜೀವಿತನಾಗಿ ಏಳಬೇಕು
21ಅಂದಿನಿಂದ ಯೇಸು, ತಾವು ಯೆರೂಸಲೇಮಿಗೆ ಹೋಗಿ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹಳ ಕಷ್ಟಪಟ್ಟು, ಕೊಲ್ಲಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತರಾಗಿ ಏಳಬೇಕೆಂದು ತಮ್ಮ ಶಿಷ್ಯರಿಗೆ ಹೇಳಲಾರಂಭಿಸಿದರು.
22ಆಗ ಪೇತ್ರನು ಅವರನ್ನು ಒಂದು ಕಡೆಗೆ ಕರೆದುಕೊಂಡುಹೋಗಿ, “ಪ್ರಭುವೇ, ಹಾಗೆ ಎಂದಿಗೂ ಆಗದಿರಲಿ! ಇದು ನಿಮಗೆ ಎಂದಿಗೂ ಸಂಭವಿಸದಿರಲಿ” ಎಂದು ಗದರಿಸಿದನು.
23ಆದರೆ ಅವರು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನ ಹಿಂದೆ ಹೋಗು! ನೀನು ನನಗೆ ಅಡ್ಡಿಯಾಗಿದ್ದೀ; ಏಕೆಂದರೆ ನಮ್ಮ ತಂದೆಗೆ ಯಾವುದು ಮುಖ್ಯವೋ ಅದರ ಬಗ್ಗೆ ಯೋಚಿಸದೆ, ಜನರಿಗೆ ಯಾವುದು ಮುಖ್ಯವೋ ಅದರ ಬಗ್ಗೆ ಯೋಚಿಸುತ್ತೀ” ಎಂದರು.
24ಆಗ ಯೇಸು ತಮ್ಮ ಶಿಷ್ಯರಿಗೆ, “ಯಾರಾದರೂ ನನ್ನ ಹಿಂದೆ ಬರಲು ಬಯಸಿದರೆ, ಅವನು ತನ್ನನ್ನು ನಿರಾಕರಿಸಿ, ತನ್ನ ಶಿಲುಬೆಯನ್ನು ಹೊತ್ತುಕೊಂಡು, ನನ್ನನ್ನು ಹಿಂಬಾಲಿಸಲಿ.
25“ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಬಯಸುತ್ತಾನೋ ಅವನು ಅದನ್ನು ಕಳೆದುಕೊಳ್ಳುವನು, ಆದರೆ ಯಾರು ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ಕಂಡುಕೊಳ್ಳುವನು.
26“ಒಬ್ಬ ಮನುಷ್ಯನು ಇಡೀ ಲೋಕವನ್ನು ಸಂಪಾದಿಸಿಕೊಂಡರೂ ತನ್ನ ಆತ್ಮವನ್ನು ಕಳೆದುಕೊಂಡರೆ ಅವನಿಗೆ ಏನು ಪ್ರಯೋಜನ? ಇಲ್ಲವೆ ಒಬ್ಬ ಮನುಷ್ಯನು ತನ್ನ ಆತ್ಮಕ್ಕೆ ಬದಲಾಗಿ ಏನನ್ನು ಕೊಡಬಲ್ಲನು?
27“ನರಪುತ್ರನು ತಮ್ಮ ದೂತರೊಡನೆ ತಮ್ಮ ಪಿತನ ಮಹಿಮೆಯಲ್ಲಿ ಬರಲಿದ್ದಾರೆ, ಆಗ ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗೆ ತಕ್ಕಂತೆ ಪ್ರತಿಫಲವನ್ನು ಕೊಡುವರು.
28“ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಇಲ್ಲಿ ನಿಂತಿರುವವರಲ್ಲಿ ಕೆಲವರು ನರಪುತ್ರನು ತಮ್ಮ ಸಾಮ್ರಾಜ್ಯದಲ್ಲಿ ಬರುವುದನ್ನು ಕಾಣುವ ತನಕ ಮರಣವನ್ನು ರುಚಿಸುವುದೇ ಇಲ್ಲ.”