ಅಗ್ರಿಪ್ಪನ ಮುಂದೆ ಪೌಲನ ವಾದಮಂಡನೆ
ಒಬ್ಬ ಅರಸನ ಮುಂದೆ ಮಾತಾಡಲು ಅವಕಾಶ ಸಿಕ್ಕಾಗ ಪೌಲನು ದಮಸ್ಕದ ದಾರಿಯ ಕಥೆಯನ್ನು ಮತ್ತೆ ಹೇಳುತ್ತಾನೆ: ಆ ಬೆಳಕು, ಆ ಧ್ವನಿ, ಕಣ್ಣುಗಳನ್ನು ತೆರೆಯುವ ಆಜ್ಞೆ. ಅತಿ ವಿದ್ಯೆಯಿಂದ ನಿನಗೆ ಹುಚ್ಚು ಹಿಡಿದಿದೆ ಎಂದು ಫೆಸ್ತನು ಕೂಗುತ್ತಾನೆ. ಇಷ್ಟು ಬೇಗ ನನ್ನನ್ನು ಕ್ರೈಸ್ತನನ್ನಾಗಿ ಮಾಡಬೇಕೆಂದಿದ್ದೀಯಾ ಎಂದು ಅಗ್ರಿಪ್ಪನು ಕೇಳುತ್ತಾನೆ, ಆಮೇಲೆ ಇವನನ್ನು ಬಿಡುಗಡೆ ಮಾಡಬಹುದಿತ್ತು ಎಂದು ಒಪ್ಪಿಕೊಳ್ಳುತ್ತಾನೆ.
26 1ಅಗ್ರಿಪ್ಪನು ಪೌಲನಿಗೆ, “ನಿನ್ನ ಪರವಾಗಿ ಮಾತನಾಡಲು ನಿನಗೆ ಅನುಮತಿ ಇದೆ,” ಎಂದನು. ಆಗ ಪೌಲನು ತನ್ನ ಕೈಚಾಚಿ ತನ್ನ ಪ್ರತಿವಾದವನ್ನು ಆರಂಭಿಸಿದನು.
2ಅಗ್ರಿಪ್ಪ ರಾಜನೇ, ಯೆಹೂದ್ಯರ ಎಲ್ಲಾ ದೋಷಾರೋಪಣೆಗಳ ವಿಷಯದಲ್ಲಿ ಈ ದಿನ ತಮ್ಮ ಮುಂದೆ ನನ್ನ ಪರವಾಗಿ ವಾದಿಸಲು ಅವಕಾಶ ದೊರೆತದ್ದನ್ನು ನಾನು ನನ್ನ ಭಾಗ್ಯವೆಂದು ಎಣಿಸುತ್ತೇನೆ, 3ವಿಶೇಷವಾಗಿ ತಾವು ಯೆಹೂದ್ಯರ ಎಲ್ಲಾ ಆಚಾರಗಳನ್ನೂ ವಿವಾದಗಳನ್ನೂ ಚೆನ್ನಾಗಿ ಬಲ್ಲವರಾಗಿರುವುದರಿಂದ, ತಾಳ್ಮೆಯಿಂದ ನನ್ನ ಮಾತನ್ನು ಕೇಳಬೇಕೆಂದು ತಮ್ಮನ್ನು ಬೇಡಿಕೊಳ್ಳುತ್ತೇನೆ.
4ನನ್ನ ಸ್ವಂತ ಜನಾಂಗದ ನಡುವೆಯೂ ಯೆರೂಸಲೇಮಿನಲ್ಲಿಯೂ ಮೊದಲಿನಿಂದ ಕಳೆದ ನನ್ನ ಬಾಲ್ಯದಿಂದಿನ ಜೀವನವನ್ನು ಎಲ್ಲಾ ಯೆಹೂದ್ಯರು ಬಲ್ಲರು. 5ಅವರು ನನ್ನನ್ನು ಬಹುಕಾಲದಿಂದ ಬಲ್ಲವರು; ಸಾಕ್ಷಿ ಹೇಳಲು ಮನಸ್ಸಿದ್ದರೆ, ನಮ್ಮ ಧರ್ಮದ ಅತ್ಯಂತ ಕಟ್ಟುನಿಟ್ಟಾದ ಪಂಗಡದ ಪ್ರಕಾರ ನಾನು ಫರಿಸಾಯನಾಗಿ ಜೀವಿಸಿದೆನೆಂಬುದನ್ನು ಅವರು ಹೇಳಬಲ್ಲರು. 6ನಮ್ಮ ತಂದೆ ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದಲ್ಲಿಟ್ಟ ನಿರೀಕ್ಷೆಯ ನಿಮಿತ್ತ ನಾನು ಈಗ ವಿಚಾರಣೆಯಲ್ಲಿ ನಿಂತಿದ್ದೇನೆ. 7ನಮ್ಮ ಹನ್ನೆರಡು ಕುಲಗಳು ಹಗಲಿರುಳೂ ಆಸಕ್ತಿಯಿಂದ ಅವರನ್ನು ಆರಾಧಿಸುತ್ತಾ ಈ ವಾಗ್ದಾನವನ್ನು ಹೊಂದಬೇಕೆಂದು ನಿರೀಕ್ಷಿಸುತ್ತವೆ. ರಾಜನೇ, ಈ ನಿರೀಕ್ಷೆಯ ನಿಮಿತ್ತವೇ ಯೆಹೂದ್ಯರು ನನ್ನ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ. 8ನಮ್ಮ ತಂದೆ ಸತ್ತವರನ್ನು ಎಬ್ಬಿಸುತ್ತಾರೆಂಬುದು ನಂಬಲಾಗದ್ದೆಂದು ನಿಮ್ಮಲ್ಲಿ ಯಾರಾದರೂ ಏಕೆ ಎಣಿಸುತ್ತೀರಿ?
9ನಜರೇತಿನ ಯೇಸುವಿನ ಹೆಸರಿಗೆ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಬೇಕೆಂದು ನಾನೇ ಭಾವಿಸಿದ್ದೆನು. 10ನಾನು ಯೆರೂಸಲೇಮಿನಲ್ಲಿ ಇದನ್ನೇ ಮಾಡಿದೆನು: ಮುಖ್ಯಯಾಜಕರಿಂದ ಅಧಿಕಾರವನ್ನು ಪಡೆದು, ಅನೇಕ ಮಂದಿ ಪವಿತ್ರರನ್ನು ಸೆರೆಮನೆಯಲ್ಲಿ ಹಾಕಿದೆನು; ಅವರನ್ನು ಕೊಲ್ಲುತ್ತಿದ್ದಾಗ ಅವರಿಗೆ ವಿರೋಧವಾಗಿ ಮತ ಕೊಟ್ಟೆನು. 11ಪ್ರತಿಯೊಂದು ಸಭಾಮಂದಿರದಲ್ಲಿಯೂ ನಾನು ಅನೇಕ ಸಾರಿ ಅವರನ್ನು ದಂಡಿಸಿ, ದೇವರ ವಿರುದ್ಧ ಮಾತನಾಡುವಂತೆ ಬಲವಂತಪಡಿಸಲು ಪ್ರಯತ್ನಿಸಿದೆನು; ಅವರ ಮೇಲೆ ಕೋಪಗೊಂಡು ಅನ್ಯಪಟ್ಟಣಗಳವರೆಗೂ ಅವರನ್ನು ಹಿಂಸಿಸಿದೆನು.
12ಅಂಥ ಒಂದು ಪ್ರಯಾಣದಲ್ಲಿ ನಾನು ಮುಖ್ಯಯಾಜಕರಿಂದ ಅಧಿಕಾರವನ್ನೂ ಅಪ್ಪಣೆಯನ್ನೂ ಪಡೆದು ದಮಸ್ಕಕ್ಕೆ ಹೋದೆನು. 13ರಾಜನೇ, ಮಧ್ಯಾಹ್ನದಲ್ಲಿ ಸೂರ್ಯನಿಗಿಂತ ಪ್ರಕಾಶಮಾನವಾದ ಬೆಳಕೊಂದು ಆಕಾಶದಿಂದ ನನ್ನ ಮತ್ತು ನನ್ನ ಜೊತೆ ಪ್ರಯಾಣಿಕರ ಸುತ್ತಲೂ ಪ್ರಜ್ವಲಿಸುವುದನ್ನು ಮಾರ್ಗದಲ್ಲಿ ನಾನು ಕಂಡೆನು.
14ನಾವೆಲ್ಲರೂ ನೆಲಕ್ಕೆ ಬಿದ್ದೆವು; ಆಗ ಇಬ್ರಿಯ ಭಾಷೆಯಲ್ಲಿ ನನ್ನೊಂದಿಗೆ ಮಾತನಾಡುವ ಧ್ವನಿಯೊಂದನ್ನು ನಾನು ಕೇಳಿದೆನು: “ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸಿಸುತ್ತೀ? ಮುಳ್ಳುಗೋಲನ್ನು ಒದೆಯುವುದು ನಿನಗೆ ಕಷ್ಟ.” a a v14 “ಮುಳ್ಳುಗೋಲನ್ನು ಒದೆಯುವುದು” ಎಂಬುದು ರೈತನ ಮುಳ್ಳುಗೋಲಿಗೆ ವಿರೋಧವಾಗಿ ಹೋರಾಡುವ ಹಟಮಾರಿ ಎತ್ತಿನ ಕುರಿತಾದ ಒಂದು ಸಾಮಾನ್ಯ ಗಾದೆಯಾಗಿತ್ತು — ಪ್ರತಿರೋಧಿಸುವುದರಿಂದ ನಿನಗೇ ಗಾಯವಾಗುತ್ತದೆ.
15ನಾನು, “ಪ್ರಭುವೇ, ತಾವು ಯಾರು?” ಎಂದು ಕೇಳಿದೆನು. ಅದಕ್ಕೆ ಪ್ರಭು, “ನೀನು ಹಿಂಸಿಸುತ್ತಿರುವ ಯೇಸುವೇ ನಾನು.” ಎಂದರು.
16“ಆದರೆ ಎದ್ದು ನಿನ್ನ ಕಾಲೂರಿ ನಿಲ್ಲು—ಇದಕ್ಕಾಗಿಯೇ ನಾನು ನಿನಗೆ ಕಾಣಿಸಿಕೊಂಡಿದ್ದೇನೆ: ನನ್ನ ವಿಷಯವಾಗಿ ನೀನು ಕಂಡದ್ದಕ್ಕೂ ಮುಂದೆ ನಾನು ನಿನಗೆ ತೋರಿಸಿಕೊಳ್ಳುವುದಕ್ಕೂ ನಿನ್ನನ್ನು ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ನೇಮಿಸುವುದಕ್ಕೆ, 17ನಿನ್ನ ಸ್ವಜನರಿಂದಲೂ ಅನ್ಯಜನರಿಂದಲೂ ನಿನ್ನನ್ನು ಬಿಡಿಸುತ್ತೇನೆ—ಅವರ ಬಳಿಗೇ ನಾನು ನಿನ್ನನ್ನು ಕಳುಹಿಸುತ್ತಿದ್ದೇನೆ, 18ಅವರ ಕಣ್ಣುಗಳನ್ನು ತೆರೆಯುವುದಕ್ಕೆ, ಅವರು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ನಮ್ಮ ತಂದೆಯ ಕಡೆಗೂ ತಿರುಗಿಕೊಂಡು, ಪಾಪಗಳ ಕ್ಷಮೆಯನ್ನೂ ನನ್ನಲ್ಲಿಟ್ಟ ವಿಶ್ವಾಸದಿಂದ ಪವಿತ್ರರಾದವರ ನಡುವೆ ಪಾಲನ್ನೂ ಹೊಂದುವಂತೆ ನಾನು ನಿನ್ನನ್ನು ಕಳುಹಿಸುತ್ತಿದ್ದೇನೆ.”
19ಆದ್ದರಿಂದ, ಅಗ್ರಿಪ್ಪ ರಾಜನೇ, ಆ ಸ್ವರ್ಗೀಯ ದರ್ಶನಕ್ಕೆ ನಾನು ಅವಿಧೇಯನಾಗಲಿಲ್ಲ, 20ಬದಲಾಗಿ, ಮೊದಲು ದಮಸ್ಕದಲ್ಲಿದ್ದವರಿಗೂ, ಆಮೇಲೆ ಯೆರೂಸಲೇಮಿನಲ್ಲಿಯೂ ಯೂದಾಯ ಸೀಮೆಯ ಎಲ್ಲೆಡೆಯಲ್ಲಿಯೂ, ಮತ್ತು ಅನ್ಯಜನರಿಗೂ, ಪಶ್ಚಾತ್ತಾಪಪಟ್ಟು ನಮ್ಮ ತಂದೆಯ ಕಡೆಗೆ ತಿರುಗಿಕೊಂಡು ತಮ್ಮ ಪಶ್ಚಾತ್ತಾಪಕ್ಕೆ ತಕ್ಕ ಕ್ರಿಯೆಗಳನ್ನು ಮಾಡಬೇಕೆಂದು ಸಾರಿದೆನು. 21ಈ ಕಾರಣದಿಂದ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲಲು ಪ್ರಯತ್ನಿಸಿದರು. 22ನಮ್ಮ ತಂದೆಯ ಸಹಾಯದಿಂದ, ಪ್ರವಾದಿಗಳೂ ಮೋಶೆಯೂ ಸಂಭವಿಸುವುದೆಂದು ಹೇಳಿದ್ದನ್ನಲ್ಲದೆ ಬೇರೇನನ್ನೂ ಹೇಳದೆ, ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷಿಕೊಡುತ್ತಾ ನಾನು ಈ ದಿನದವರೆಗೂ ನಿಂತಿದ್ದೇನೆ: 23ಅಂದರೆ, ಕ್ರಿಸ್ತನು ಬಾಧೆಯನ್ನನುಭವಿಸಬೇಕೆಂದೂ, ಮತ್ತು ಸತ್ತವರೊಳಗಿಂದ ಮೊದಲು ಎದ್ದು ನಮ್ಮ ಜನರಿಗೂ ಅನ್ಯಜನರಿಗೂ ಬೆಳಕನ್ನು ಪ್ರಕಟಿಸುವರೆಂದೂ.
24ಪೌಲನು ಹೀಗೆ ತನ್ನ ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು, “ಪೌಲನೇ, ನಿನಗೆ ಹುಚ್ಚು ಹಿಡಿದಿದೆ! ನಿನ್ನ ಅಪಾರ ವಿದ್ಯೆ ನಿನ್ನನ್ನು ಹುಚ್ಚನನ್ನಾಗಿ ಮಾಡುತ್ತಿದೆ,” ಎಂದು ಕೂಗಿ ಹೇಳಿದನು.
25ಅದಕ್ಕೆ ಪೌಲನು ಹೀಗೆಂದನು: “ಮಹಾ ಶ್ರೇಷ್ಠನಾದ ಫೆಸ್ತನೇ, ನನಗೆ ಹುಚ್ಚು ಹಿಡಿದಿಲ್ಲ; ನಾನು ಸತ್ಯದ ಮತ್ತು ಸ್ವಸ್ಥಬುದ್ಧಿಯ ಮಾತುಗಳನ್ನು ಆಡುತ್ತಿದ್ದೇನೆ. 26ರಾಜರಿಗೆ ಈ ಸಂಗತಿಗಳು ತಿಳಿದಿವೆ—ಅವರ ಮುಂದೆ ನಾನು ಧೈರ್ಯವಾಗಿ ಮಾತನಾಡುತ್ತೇನೆ. ಇವುಗಳಲ್ಲಿ ಯಾವುದೂ ಅವರ ಗಮನದಿಂದ ತಪ್ಪಿಹೋಗಲಿಲ್ಲವೆಂದು ನನಗೆ ನಿಶ್ಚಯವಾಗಿ ತಿಳಿದಿದೆ; ಏಕೆಂದರೆ ಇದು ಮೂಲೆಯಲ್ಲಿ ನಡೆದ ಕಾರ್ಯವಲ್ಲ. 27ಅಗ್ರಿಪ್ಪ ರಾಜನೇ, ತಾವು ಪ್ರವಾದಿಗಳನ್ನು ನಂಬುತ್ತೀರಾ? ತಾವು ನಂಬುತ್ತೀರೆಂದು ನಾನು ಬಲ್ಲೆನು,” ಎಂದನು.
28ಅದಕ್ಕೆ ಅಗ್ರಿಪ್ಪನು, “ಇಷ್ಟು ಬೇಗನೆ ನನ್ನನ್ನು ಕ್ರೈಸ್ತನಾಗುವಂತೆ ಒಪ್ಪಿಸುತ್ತೀಯಾ?” ಎಂದನು.
29ಅದಕ್ಕೆ ಪೌಲನು, “ಸ್ವಲ್ಪ ಕಾಲದಲ್ಲಾಗಲಿ ಬಹಳ ಕಾಲದಲ್ಲಾಗಲಿ, ತಾವು ಮಾತ್ರವಲ್ಲ, ಈ ದಿನ ನನ್ನ ಮಾತನ್ನು ಕೇಳುವವರೆಲ್ಲರೂ—ಈ ಸಂಕೋಲೆಗಳ ಹೊರತಾಗಿ—ನನ್ನಂತೆ ಆಗಬೇಕೆಂದು ನಮ್ಮ ತಂದೆಗೆ ನಾನು ಪ್ರಾರ್ಥಿಸುತ್ತೇನೆ,” ಎಂದನು.
30ಆಗ ರಾಜನೂ ಅಧಿಪತಿಯೂ ಬೆರ್ನಿಕೆಯೂ ಅವರ ಜೊತೆ ಕುಳಿತಿದ್ದವರೂ ಎದ್ದರು.
31ಅವರು ಹೊರಟುಹೋಗುತ್ತಾ, “ಈ ಮನುಷ್ಯನು ಮರಣಕ್ಕಾಗಲಿ ಸೆರೆವಾಸಕ್ಕಾಗಲಿ ಪಾತ್ರನಲ್ಲ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
32ಅಗ್ರಿಪ್ಪನು ಫೆಸ್ತನಿಗೆ, “ಈ ಮನುಷ್ಯನು ಕೈಸರನಿಗೆ ಮೊರೆಯಿಡದೆ ಇದ್ದಿದ್ದರೆ ಇವನನ್ನು ಬಿಡುಗಡೆ ಮಾಡಬಹುದಾಗಿತ್ತು,” ಎಂದನು.