ದಾನ್ ಕುಲವು ನೆಲೆಸಲು ಸ್ಥಳವನ್ನು ಹುಡುಕುವುದು
ಸ್ವಾಸ್ತ್ಯವಿಲ್ಲದ ದಾನ್ ಕುಲದ ಗೂಢಚಾರರು ಮೀಕನ ಕೂಲಿ ಯಾಜಕನಿಂದ ನಮ್ಮ ತಂದೆಯ ಮಾತನ್ನು ಕೇಳುತ್ತಾರೆ, ಅನುಕೂಲವಾದ ಉತ್ತರವನ್ನು ಪಡೆಯುತ್ತಾರೆ. ಆರುನೂರು ಮಂದಿ ಶಸ್ತ್ರಧಾರಿಗಳು ಹಿಂತಿರುಗಿ ಬಂದು, ಗುಡಿಯನ್ನು ದೋಚಿ, ಯಾಜಕನಿಗೆ ದೊಡ್ಡ ಸಭೆಯನ್ನು ನೀಡುತ್ತಾರೆ; ಅವನು ಸಂತೋಷದಿಂದ ಹೋಗುತ್ತಾನೆ. ಅವರು ಶಾಂತಿಯಿಂದಿದ್ದ ಒಂದು ಊರನ್ನು ಕತ್ತಿಗೆ ಗುರಿಮಾಡಿ, ವಿಗ್ರಹವನ್ನು ಸ್ಥಾಪಿಸುತ್ತಾರೆ.
18 1ಆ ದಿನಗಳಲ್ಲಿ ಇಸ್ರಾಯೇಲಿನಲ್ಲಿ ಅರಸನಿರಲಿಲ್ಲ. ದಾನ್ ಕುಲದವರಿಗೆ ಅಲ್ಲಿಯವರೆಗೆ ಇಸ್ರಾಯೇಲಿನ ಕುಲಗಳ ಮಧ್ಯೆ ಸ್ವಾಸ್ತ್ಯವು ದೊರೆಯದ ಕಾರಣ ಅವರು ನೆಲೆಸಲು ಪ್ರದೇಶವನ್ನು ಹುಡುಕುತ್ತಿದ್ದರು. 2ದಾನ್ಯರು ದೇಶವನ್ನು ಪತ್ತೆಹಚ್ಚಿ ಪರಿಶೋಧಿಸುವುದಕ್ಕಾಗಿ ತಮ್ಮ ಕುಲದ ಚೊರ್ಗಾ ಎಷ್ಟಾವೋಲ್ ಊರುಗಳ ಐದು ಮಂದಿ ಶೂರರನ್ನು ಕಳುಹಿಸಿದರು. ಅವರು ಅವರಿಗೆ, “ಹೋಗಿ ದೇಶವನ್ನು ಪರಿಶೋಧಿಸಿರಿ,” ಎಂದರು. ಅವರು ಎಫ್ರಾಯೀಮ್ ಬೆಟ್ಟದ ಸೀಮೆಗೆ, ಮೀಕನ ಮನೆಗೆ ಬಂದು ಅಲ್ಲಿ ರಾತ್ರಿ ತಂಗಿದರು.
3ಮೀಕನ ಮನೆಯ ಬಳಿ ಅವರು ಆ ಯುವ ಲೇವಿಯನ ಧ್ವನಿಯನ್ನು ಗುರುತಿಸಿ ಅಲ್ಲಿಗೆ ತಿರುಗಿಕೊಂಡು ಅವನಿಗೆ, “ನಿನ್ನನ್ನು ಇಲ್ಲಿಗೆ ಕರೆತಂದವರು ಯಾರು? ಈ ಸ್ಥಳದಲ್ಲಿ ನೀನು ಏನು ಮಾಡುತ್ತಿ? ಇಲ್ಲಿ ನಿನಗೆ ಏನಿದೆ?” ಎಂದರು.
4ಅದಕ್ಕೆ ಅವನು, “ಮೀಕನು ನನಗೆ ಹೀಗೆ ಹೀಗೆ ಮಾಡಿದನು; ಅವನು ನನ್ನನ್ನು ಸಂಬಳಕ್ಕೆ ಇಟ್ಟುಕೊಂಡನು, ನಾನು ಅವನ ಯಾಜಕನಾದೆನು,” ಎಂದನು.
5ಅವರು ಅವನಿಗೆ, “ನಾವು ಹೋಗುವ ಮಾರ್ಗವು ಸಫಲವಾಗುವುದೋ ಇಲ್ಲವೋ ಎಂಬುದನ್ನು ನಾವು ತಿಳಿದುಕೊಳ್ಳುವಂತೆ ದಯಮಾಡಿ ನಮ್ಮ ತಂದೆಯನ್ನು ಕೇಳು,” ಎಂದರು.
6ಅದಕ್ಕೆ ಆ ಯಾಜಕನು, “ಸಮಾಧಾನದಿಂದ ಹೋಗಿರಿ. ನೀವು ಹೋಗುವ ಮಾರ್ಗವು ನಮ್ಮ ತಂದೆಯ ದೃಷ್ಟಿಯ ಕೆಳಗಿದೆ,” ಎಂದನು.
7ಆಗ ಆ ಐದು ಮಂದಿ ಲಯಿಷ್ ಊರಿಗೆ ಹೋಗಿ, ಅಲ್ಲಿಯ ಜನರು ಚೀದೋನ್ಯರ ಹಾಗೆ ಸುರಕ್ಷಿತವಾಗಿ, ಶಾಂತವಾಗಿ, ನಿಶ್ಚಿಂತೆಯಿಂದ ವಾಸಿಸುತ್ತಾ, ದೇಶದಲ್ಲಿ ಯಾವ ಕೊರತೆಯೂ ಇಲ್ಲದೆ ಸಂಪತ್ತನ್ನು ಹೊಂದಿರುವುದನ್ನು ಕಂಡರು. ಅವರು ಚೀದೋನ್ಯರಿಂದ ದೂರವಾಗಿದ್ದು ಯಾರ ಸಂಗಡವೂ ವ್ಯವಹಾರವಿಲ್ಲದವರಾಗಿದ್ದರು. 8ಅವರು ಚೊರ್ಗಾ ಎಷ್ಟಾವೋಲಿನಲ್ಲಿದ್ದ ತಮ್ಮ ಬಂಧುಗಳ ಬಳಿಗೆ ಹಿಂದಿರುಗಿದಾಗ, ಅವರು ಇವರನ್ನು, “ನೀವು ಏನು ಕಂಡಿರಿ?” ಎಂದು ಕೇಳಿದರು.
9ಅದಕ್ಕೆ ಅವರು, “ಏಳಿರಿ, ಅವರ ಮೇಲೆ ಯುದ್ಧಕ್ಕೆ ಹೋಗೋಣ! ನಾವು ಆ ದೇಶವನ್ನು ಕಂಡೆವು—ಅದು ಬಹಳ ಒಳ್ಳೆಯದು. ನೀವು ಸುಮ್ಮನಿರುವಿರಾ? ಹೋಗಿ ಆ ದೇಶವನ್ನು ವಶಪಡಿಸಿಕೊಳ್ಳಲು ತಡಮಾಡಬೇಡಿರಿ. 10ನೀವು ಅಲ್ಲಿಗೆ ಮುಟ್ಟಿದಾಗ, ವಿಶಾಲವಾದ ದೇಶದಲ್ಲಿ ನಿಶ್ಚಿಂತೆಯಿಂದಿರುವ ಜನರ ಬಳಿಗೆ ಸೇರುವಿರಿ. ನಮ್ಮ ತಂದೆ ಅದನ್ನು ನಿಮ್ಮ ಕೈಗೆ ಒಪ್ಪಿಸಿದ್ದಾರೆ—ಭೂಮಿಯ ಮೇಲೆ ಯಾವ ಕೊರತೆಯೂ ಇಲ್ಲದ ಸ್ಥಳ ಅದು,” ಎಂದರು.
11ದಾನ್ ಕುಲದ 600 ಮಂದಿ ಯುದ್ಧಾಯುಧಗಳಿಂದ ಸನ್ನದ್ಧರಾಗಿ ಚೊರ್ಗಾ ಎಷ್ಟಾವೋಲಿನಿಂದ ಹೊರಟರು. 12ಅವರು ಹೋಗಿ ಯೆಹೂದದ ಕಿರ್ಯತ್ಯಾರೀಮಿನಲ್ಲಿ ಪಾಳೆಯಮಾಡಿಕೊಂಡರು. ಆದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಮಹನೇ-ದಾನ್ ಎಂದು ಹೆಸರು; ಅದು ಕಿರ್ಯತ್ಯಾರೀಮಿನ ಪಶ್ಚಿಮಕ್ಕಿದೆ. 13ಅಲ್ಲಿಂದ ಅವರು ಎಫ್ರಾಯೀಮ್ ಬೆಟ್ಟದ ಸೀಮೆಗೆ ದಾಟಿಹೋಗಿ ಮೀಕನ ಮನೆಗೆ ಬಂದರು.
14ಆಗ ಲಯಿಷ್ ದೇಶವನ್ನು ಪತ್ತೆಹಚ್ಚಿದ್ದ ಆ ಐದು ಮಂದಿ ತಮ್ಮ ಬಂಧುಗಳಿಗೆ, “ಈ ಮನೆಗಳಲ್ಲಿ ಏಫೋದ್, ಗೃಹದೇವತೆಗಳು, ಕೆತ್ತಿದ ವಿಗ್ರಹ ಹಾಗೂ ಎರಕಹೊಯ್ದ ವಿಗ್ರಹ ಇವೆ ಎಂದು ನಿಮಗೆ ತಿಳಿದಿದೆಯೋ? ಈಗ ಏನು ಮಾಡಬೇಕೆಂದು ನಿಶ್ಚಯಿಸಿರಿ,” ಎಂದರು. 15ಆಗ ಅವರು ಅಲ್ಲಿಗೆ ತಿರುಗಿಕೊಂಡು ಆ ಯುವ ಲೇವಿಯನ ಮನೆಗೆ, ಮೀಕನ ಮನೆಗೆ ಬಂದು ಅವನ ಕ್ಷೇಮವನ್ನು ವಿಚಾರಿಸಿದರು. 16ಆಯುಧ ಧರಿಸಿದ 600 ಮಂದಿ ದಾನ್ಯರು ಬಾಗಿಲ ಪ್ರವೇಶದ್ವಾರದಲ್ಲಿ ನಿಂತರು. 17ದೇಶವನ್ನು ಪತ್ತೆಹಚ್ಚಿದ್ದ ಆ ಐದು ಮಂದಿ ಒಳಗೆ ಹೋಗಿ ಕೆತ್ತಿದ ವಿಗ್ರಹ, ಏಫೋದ್, ಗೃಹದೇವತೆಗಳು ಹಾಗೂ ಎರಕಹೊಯ್ದ ವಿಗ್ರಹವನ್ನು ತೆಗೆದುಕೊಂಡರು; ಆ ವೇಳೆಯಲ್ಲಿ ಆ ಯಾಜಕನು ಆಯುಧ ಧರಿಸಿದ 600 ಮಂದಿಯೊಡನೆ ಬಾಗಿಲ ಪ್ರವೇಶದ್ವಾರದಲ್ಲಿ ನಿಂತಿದ್ದನು.
18ಈ ಮನುಷ್ಯರು ಮೀಕನ ಮನೆಯೊಳಗೆ ಹೋಗಿ ಕೆತ್ತಿದ ವಿಗ್ರಹ, ಏಫೋದ್, ಗೃಹದೇವತೆಗಳು ಹಾಗೂ ಎರಕಹೊಯ್ದ ವಿಗ್ರಹವನ್ನು ತೆಗೆದುಕೊಂಡಾಗ, ಆ ಯಾಜಕನು ಅವರನ್ನು, “ನೀವು ಏನು ಮಾಡುತ್ತಿದ್ದೀರಿ?” ಎಂದು ಕೇಳಿದನು.
19ಅದಕ್ಕೆ ಅವರು, “ಸುಮ್ಮನಿರು! ಬಾಯಿಯ ಮೇಲೆ ಕೈಯಿಟ್ಟುಕೊಂಡು ನಮ್ಮ ಸಂಗಡ ಬಾ. ನಮಗೆ ತಂದೆಯೂ ಯಾಜಕನೂ ಆಗಿರು. ಒಬ್ಬನ ಮನೆಗೆ ಯಾಜಕನಾಗಿರುವುದು ನಿನಗೆ ಒಳ್ಳೆಯದೋ, ಇಲ್ಲವೆ ಇಸ್ರಾಯೇಲಿನ ಒಂದು ಕುಲಕ್ಕೂ ಗೋತ್ರಕ್ಕೂ ಯಾಜಕನಾಗಿರುವುದು ಒಳ್ಳೆಯದೋ?” ಎಂದರು.
20ಆಗ ಆ ಯಾಜಕನ ಹೃದಯವು ಸಂತೋಷಗೊಂಡಿತು. ಅವನು ಏಫೋದ್, ಗೃಹದೇವತೆಗಳು ಹಾಗೂ ಕೆತ್ತಿದ ವಿಗ್ರಹವನ್ನು ತೆಗೆದುಕೊಂಡು ಆ ಜನರ ಮಧ್ಯೆ ಸೇರಿಹೋದನು. 21ಅನಂತರ ಅವರು ಮಕ್ಕಳನ್ನೂ ಪಶುಗಳನ್ನೂ ತಮ್ಮ ಸೊತ್ತನ್ನೂ ತಮ್ಮ ಮುಂದೆ ಇಟ್ಟುಕೊಂಡು ತಿರುಗಿಕೊಂಡು ಹೊರಟರು. 22ಅವರು ಮೀಕನ ಮನೆಯಿಂದ ದೂರ ಹೋದ ಮೇಲೆ, ಮೀಕನ ಮನೆಯ ಹತ್ತಿರವಿದ್ದ ಜನರು ಕೂಡಿಬಂದು ದಾನ್ಯರನ್ನು ಬೆನ್ನಟ್ಟಿ ಸಮೀಪಿಸಿದರು. 23ಅವರು ದಾನ್ಯರಿಗೆ ಕೂಗಿದರು. ಆಗ ದಾನ್ಯರು ತಿರುಗಿಕೊಂಡು ಮೀಕನಿಗೆ, “ನಿನ್ನ ಜನರನ್ನು ಕೂಡಿಸಿಕೊಂಡು ಬರುವಷ್ಟು ನಿನಗೆ ಏನಾಯಿತು?” ಎಂದರು.
24ಅದಕ್ಕೆ ಅವನು, “ನಾನು ಮಾಡಿಸಿಕೊಂಡ ದೇವರುಗಳನ್ನೂ ಆ ಯಾಜಕನನ್ನೂ ನೀವು ತೆಗೆದುಕೊಂಡು ಹೋದಿರಲ್ಲಾ. ಇನ್ನು ನನಗೆ ಏನು ಉಳಿದಿದೆ? ಹೀಗಿರಲು ‘ನಿನಗೆ ಏನಾಯಿತು?’ ಎಂದು ನೀವು ನನ್ನನ್ನು ಕೇಳುವುದು ಹೇಗೆ?” ಎಂದನು.
25ಅದಕ್ಕೆ ದಾನ್ಯರು ಅವನಿಗೆ, “ನಿನ್ನ ಧ್ವನಿ ನಮ್ಮ ಮಧ್ಯೆ ಕೇಳಿಸದಿರಲಿ; ಇಲ್ಲವಾದರೆ ಕೋಪಗೊಂಡ ಜನರು ನಿನ್ನ ಮೇಲೆ ಬಿದ್ದು ನೀನು ನಿನ್ನ ಪ್ರಾಣವನ್ನೂ ನಿನ್ನ ಮನೆಯವರ ಪ್ರಾಣಗಳನ್ನೂ ಕಳೆದುಕೊಳ್ಳುವಿ,” ಎಂದರು.
26ದಾನ್ಯರು ತಮ್ಮ ದಾರಿ ಹಿಡಿದು ಹೋದರು; ಅವರು ತನಗಿಂತ ಬಲಿಷ್ಠರೆಂದು ಮೀಕನು ಕಂಡಾಗ ಅವನು ತಿರುಗಿ ಮನೆಗೆ ಹೋದನು. 27ಅವರು ಮೀಕನು ಮಾಡಿಸಿದ್ದನ್ನೂ ಅವನ ಯಾಜಕನನ್ನೂ ತೆಗೆದುಕೊಂಡು ಶಾಂತವಾಗಿ ನಿಶ್ಚಿಂತೆಯಿಂದಿದ್ದ ಜನರ ಲಯಿಷ್ ಊರಿಗೆ ಬಂದು ಅವರನ್ನು ಕತ್ತಿಯ ಅಲಗಿನಿಂದ ಹೊಡೆದು ಆ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು. 28ಆ ಪಟ್ಟಣವು ಚೀದೋನಿನಿಂದ ದೂರವಾಗಿದ್ದು ಯಾರ ಸಂಗಡವೂ ಸಂಬಂಧವಿಲ್ಲದ ಕಾರಣ ಅವರನ್ನು ಬಿಡಿಸುವವರು ಯಾರೂ ಇರಲಿಲ್ಲ. ಅದು ಬೇತ್-ರೆಹೋಬಿಗೆ ಸೇರಿದ ಕಣಿವೆಯಲ್ಲಿತ್ತು. ದಾನ್ಯರು ಆ ಪಟ್ಟಣವನ್ನು ಪುನಃ ಕಟ್ಟಿ ಅಲ್ಲಿ ವಾಸಮಾಡಿದರು. 29ಅವರು ಇಸ್ರಾಯೇಲನ ಮಗನಾದ ತಮ್ಮ ಪೂರ್ವಜ ದಾನನ ಹೆಸರಿನಿಂದ ಆ ಪಟ್ಟಣಕ್ಕೆ ದಾನ್ ಎಂದು ಹೆಸರಿಟ್ಟರು; ಆದರೆ ಮೊದಲು ಆ ಪಟ್ಟಣದ ಹೆಸರು ಲಯಿಷ್ ಆಗಿತ್ತು. 30ದಾನ್ಯರು ಆ ಕೆತ್ತಿದ ವಿಗ್ರಹವನ್ನು ತಮಗಾಗಿ ನಿಲ್ಲಿಸಿದರು. ಮೋಶೆಯ ಮೊಮ್ಮಗನೂ ಗೇರ್ಷೋಮನ ಮಗನೂ ಆದ ಯೋನಾತಾನನೂ ಅವನ ಮಕ್ಕಳೂ ಆ ದೇಶವು ಸೆರೆಯಾಗಿ ಒಯ್ಯಲ್ಪಡುವ ದಿನದವರೆಗೂ ದಾನ್ ಕುಲಕ್ಕೆ ಯಾಜಕರಾಗಿದ್ದರು. 31ನಮ್ಮ ತಂದೆಯ ಮಂದಿರವು ಶೀಲೋವಿನಲ್ಲಿದ್ದ ಕಾಲವೆಲ್ಲಾ ಅವರು ಮೀಕನು ಮಾಡಿಸಿದ ಆ ಕೆತ್ತಿದ ವಿಗ್ರಹವನ್ನು ತಮಗಾಗಿ ನಿಲ್ಲಿಸಿಕೊಂಡಿದ್ದರು.