ಸರ್ವಶಕ್ತರು ಕಾಲಗಳನ್ನು ನಿಗದಿಪಡಿಸದಿರುವುದೇಕೆ
ಸರ್ವಶಕ್ತನು ನ್ಯಾಯತೀರ್ಪಿನ ದಿನಗಳನ್ನು ಏಕೆ ನೇಮಿಸುವುದಿಲ್ಲ ಎಂದು ಯೋಬನು ಕೇಳುತ್ತಾನೆ. ಉತ್ತರ ಸಿಗದ ಸಂಗತಿಗಳನ್ನು ಪಟ್ಟಿಮಾಡುತ್ತಾನೆ: ಗಡಿಕಲ್ಲುಗಳನ್ನು ಸರಿಸಲಾಗುತ್ತದೆ, ವಿಧವೆಯ ಎತ್ತನ್ನು ಕಸಿದುಕೊಳ್ಳಲಾಗುತ್ತದೆ, ಬಡವರು ಬೆಟ್ಟದ ಮಳೆಯಲ್ಲಿ ಬೆತ್ತಲೆಯಾಗಿ ಮಲಗುತ್ತಾರೆ, ಕೊಲೆಗಾರರೂ ಕಳ್ಳರೂ ಕತ್ತಲೆಯಲ್ಲಿ ಕೆಲಸ ಮಾಡುತ್ತಾರೆ, ಸಾಯುತ್ತಿರುವವರು ನರಳುತ್ತಾರೆ, ಆದರೆ ದೇವರು ಯಾರ ಮೇಲೂ ದೋಷ ಹೊರಿಸುವುದಿಲ್ಲ.
24 1“ಸರ್ವಶಕ್ತರು ನ್ಯಾಯತೀರ್ಪಿಗಾಗಿ ಕಾಲಗಳನ್ನು ಏಕೆ ಗೊತ್ತುಮಾಡುವುದಿಲ್ಲ? ಅವರನ್ನು ಬಲ್ಲವರು ಅವರ ದಿನಗಳನ್ನು ಏಕೆ ಎಂದಿಗೂ ಕಾಣುವುದಿಲ್ಲ? 2ದುಷ್ಟರು ಮೇರೆಗಲ್ಲುಗಳನ್ನು ಸರಿಸುತ್ತಾರೆ; ಅವರು ಮಂದೆಗಳನ್ನು ಕಸಿದುಕೊಂಡು ತಮ್ಮವೇ ಎಂಬಂತೆ ಮೇಯಿಸುತ್ತಾರೆ. 3ಅವರು ತಂದೆಯಿಲ್ಲದವರ ಕತ್ತೆಯನ್ನು ಹೊಡೆದೊಯ್ಯುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ. 4ಅವರು ದರಿದ್ರರನ್ನು ದಾರಿಯಿಂದ ನೂಕುತ್ತಾರೆ; ಇದರಿಂದ ದೇಶದ ಬಡವರು ಅಡಗಿಕೊಳ್ಳಬೇಕಾಗುತ್ತದೆ. 5ನೋಡಿ—ಅಡವಿಯ ಕಾಡುಕತ್ತೆಗಳಂತೆ ಬಡವರು ಆಹಾರವನ್ನು ಹುಡುಕುತ್ತಾ ತಮ್ಮ ದುಡಿಮೆಗೆ ಹೊರಡುತ್ತಾರೆ; ಬೆಂಗಾಡು ಅವರ ಮಕ್ಕಳಿಗೆ ರೊಟ್ಟಿಯನ್ನು ಒದಗಿಸುತ್ತದೆ. 6ಅವರು ತಮ್ಮದಲ್ಲದ ಹೊಲಗಳಲ್ಲಿ ಮೇವನ್ನು ಕೊಯ್ಯುತ್ತಾರೆ, ದುಷ್ಟನ ದ್ರಾಕ್ಷೇತೋಟದ ಹಕ್ಕಲನ್ನು ಆಯುತ್ತಾರೆ. 7ಅವರು ಬೆತ್ತಲೆಯಾಗಿ, ಬಟ್ಟೆಯಿಲ್ಲದೆ, ಚಳಿಗೆ ಹೊದಿಕೆಯೂ ಇಲ್ಲದೆ ರಾತ್ರಿ ಕಳೆಯುತ್ತಾರೆ. 8ಅವರು ಬೆಟ್ಟದ ಮಳೆಯಿಂದ ತೊಯ್ದುಹೋಗುತ್ತಾರೆ, ಆಶ್ರಯವಿಲ್ಲದೆ ಬಂಡೆಗೆ ಒತ್ತಿಕೊಂಡು ಅಡಗುತ್ತಾರೆ. 9ತಂದೆಯಿಲ್ಲದ ಕೂಸನ್ನು ಮೊಲೆಯಿಂದ ಕಸಿದುಕೊಳ್ಳುತ್ತಾರೆ, ಬಡವನ ಹಸುಗೂಸನ್ನು ಒತ್ತೆಯಾಗಿ ಹಿಡಿದುಕೊಳ್ಳುತ್ತಾರೆ. 10ಅವರು ಬೆತ್ತಲೆಯಾಗಿ, ಬಟ್ಟೆಯಿಲ್ಲದೆ ತಿರುಗಾಡುತ್ತಾರೆ; ಹಸಿವಿನಿಂದ ಸಿವುಡುಗಳನ್ನು ಹೊರುತ್ತಾರೆ. 11ಅವರು ಆಲಿವ್ ಮರಗಳ ತೋಪುಗಳ ನಡುವೆ ಎಣ್ಣೆಯನ್ನು ಹಿಂಡುತ್ತಾರೆ; ದ್ರಾಕ್ಷೆಯ ಆಲೆಗಳನ್ನು ತುಳಿಯುತ್ತಾರೆ, ಆದರೂ ಬಾಯಾರಿಕೆಯಿಂದ ಇರುತ್ತಾರೆ. 12ಪಟ್ಟಣದಿಂದ ಸಾಯುತ್ತಿರುವವರು ನರಳುತ್ತಾರೆ, ಗಾಯಗೊಂಡವರ ಗಂಟಲುಗಳು ಸಹಾಯಕ್ಕಾಗಿ ಮೊರೆಯಿಡುತ್ತವೆ— ಆದರೂ ದೇವರು ಯಾರ ಮೇಲೂ ಈ ಅಪರಾಧವನ್ನು ಹೊರಿಸುವುದಿಲ್ಲ.
13“ಬೆಳಕಿಗೆ ವಿರುದ್ಧ ದಂಗೆಯೇಳುವವರು ಇದ್ದಾರೆ; ಅವರು ಅದರ ಮಾರ್ಗಗಳನ್ನು ಅರಿಯರು, ಅದರ ದಾರಿಗಳಲ್ಲಿ ನೆಲೆಯಾಗಿ ಇರರು. 14ಕೊಲೆಗಾರನು ಮುಂಜಾನೆ ಎದ್ದು ಬಡವರನ್ನೂ ದರಿದ್ರರನ್ನೂ ಕೊಲ್ಲುತ್ತಾನೆ, ರಾತ್ರಿಯಲ್ಲಿ ಕಳ್ಳನಂತೆ ಅಲೆಯುತ್ತಾನೆ. 15ವ್ಯಭಿಚಾರಿಯ ಕಣ್ಣು ಸಂಜೆಗತ್ತಲಿಗಾಗಿ ಕಾಯುತ್ತದೆ; ‘ನನ್ನನ್ನು ಯಾವ ಕಣ್ಣೂ ಕಾಣದು’ ಎಂದುಕೊಂಡು ಅವನು ತನ್ನ ಮುಖವನ್ನು ಮರೆಮಾಡಿಕೊಳ್ಳುತ್ತಾನೆ. 16ಕತ್ತಲೆಯಲ್ಲಿ ಅವರು ಮನೆಗಳನ್ನು ಕನ್ನ ಕೊರೆಯುತ್ತಾರೆ; ಹಗಲಿನಲ್ಲಿ ತಮ್ಮನ್ನು ಕೂಡಿಹಾಕಿಕೊಳ್ಳುತ್ತಾರೆ, ಏಕೆಂದರೆ ಅವರಿಗೆ ಬೆಳಕಿನ ಸಂಗಡ ಯಾವ ಸಂಬಂಧವೂ ಬೇಡ. 17ಅವರೆಲ್ಲರಿಗೆ ಕಾರ್ಗತ್ತಲೆಯೇ ಬೆಳಗಾಗಿದೆ; ಕತ್ತಲೆಯ ಭೀಕರತೆಗಳೊಂದಿಗೆ ಅವರು ಹೊಂದಿಕೊಂಡಿದ್ದಾರೆ.
18“ಆದರೂ ನೀವು ಹೇಳುತ್ತೀರಿ, ಅವರು ನೀರಿನ ಮೇಲ್ಮೈಯಲ್ಲಿ ವೇಗವಾಗಿ ತೇಲಿಹೋಗುವವರು; ಅವರ ಭೂಪಾಲು ಶಾಪಗ್ರಸ್ತ, ಯಾರೂ ಅವರ ದ್ರಾಕ್ಷೇತೋಟಗಳ ಕಡೆಗೆ ತಿರುಗುವುದಿಲ್ಲ. 19ಕ್ಷಾಮವೂ ಬಿಸಿಲೂ ಕರಗುವ ಹಿಮವನ್ನು ಅಪಹರಿಸುವಂತೆ, ಹಾಗೆಯೇ ಸಮಾಧಿಯು ಪಾಪಮಾಡಿದವರನ್ನು ಕಸಿದುಕೊಳ್ಳುತ್ತದೆ. 20ಅವರನ್ನು ಹೆತ್ತ ಗರ್ಭವೇ ಅವರನ್ನು ಮರೆತುಬಿಡುತ್ತದೆ; ಹುಳವು ಅವರನ್ನು ತಿಂದು ಸವಿಯುತ್ತದೆ; ಅವರ ನೆನಪು ಇನ್ನಿಲ್ಲವಾಗುತ್ತದೆ, ದುಷ್ಟತನವು ಮರದಂತೆ ಮುರಿದುಹೋಗುತ್ತದೆ. 21ಮಕ್ಕಳನ್ನು ಹೆರದ ಬಂಜೆಯನ್ನು ಅವರು ಕಬಳಿಸುತ್ತಾರೆ, ವಿಧವೆಗೆ ಯಾವ ದಯೆಯನ್ನೂ ತೋರಿಸುವುದಿಲ್ಲ.
22“ಆದರೂ ದೇವರು ತಮ್ಮ ಶಕ್ತಿಯಿಂದ ಬಲಿಷ್ಠರನ್ನು ಎಳೆದೊಯ್ಯುತ್ತಾರೆ; ಅವರು ಎದ್ದೇಳುವಾಗ ಯಾರಿಗೂ ತನ್ನ ಜೀವದ ಬಗ್ಗೆ ಖಾತ್ರಿ ಇರುವುದಿಲ್ಲ. 23ದೇವರು ಅವರನ್ನು ಸುರಕ್ಷೆಯಲ್ಲಿ ವಿಶ್ರಮಿಸುವಂತೆ ಬಿಡುತ್ತಾರೆ, ಅವರು ಅದರ ಮೇಲೆ ಆತುಕೊಳ್ಳುತ್ತಾರೆ, ಆದರೆ ದೇವರ ಕಣ್ಣುಗಳು ಅವರ ಮಾರ್ಗಗಳ ಮೇಲಿವೆ. 24ಸ್ವಲ್ಪಕಾಲ ಅವರು ಉನ್ನತಿಗೇರಿಸಲ್ಪಡುತ್ತಾರೆ, ಆಮೇಲೆ ಇಲ್ಲವಾಗುತ್ತಾರೆ; ಅವರು ತಗ್ಗಿಸಲ್ಪಟ್ಟು ಎಲ್ಲರಂತೆ ಒಟ್ಟುಗೂಡಿಸಲ್ಪಡುತ್ತಾರೆ, ತೆನೆಗಳಂತೆ ಕೊಯ್ಯಲ್ಪಡುತ್ತಾರೆ. 25ಹೀಗಿಲ್ಲದಿದ್ದರೆ, ನನ್ನನ್ನು ಸುಳ್ಳುಗಾರನೆಂದು ಯಾರು ತೋರಿಸಬಲ್ಲರು, ನನ್ನ ಮಾತುಗಳನ್ನು ವ್ಯರ್ಥಗೊಳಿಸಬಲ್ಲರು?”