ಅವರನ್ನು ಕಂಡುಕೊಳ್ಳಲಾದರೆ ಎಷ್ಟೋ ಒಳ್ಳೆಯದು
ಯೋಬನಿಗೆ ಬೇಕಾದದ್ದು ನ್ಯಾಯಾಲಯ, ಜಗಳವಲ್ಲ. ದೇವರು ಎಲ್ಲಿ ವಾಸಿಸುತ್ತಾರೆಂದು ಕಂಡುಕೊಳ್ಳಸಾಧ್ಯವಾದರೆ, ಅವನು ತನ್ನ ವ್ಯಾಜ್ಯವನ್ನು ಮುಂದಿಟ್ಟು ನಿರ್ದೋಷಿಯೆಂದು ಬಿಡುಗಡೆಯಾಗುತ್ತಿದ್ದನು. ಆದರೆ ದೇವರು ಪೂರ್ವದಲ್ಲಾಗಲಿ ಪಶ್ಚಿಮದಲ್ಲಾಗಲಿ ಇಲ್ಲ, ಮತ್ತು ತಮಗೆ ಇಷ್ಟವಾದುದನ್ನೇ ಮಾಡುತ್ತಾರೆ. ತಾನು ಬಂಗಾರದಂತೆ ಹೊರಬರುವೆನು ಎಂದು ಯೋಬನು ಹೇಳುತ್ತಾನೆ, ಆದರೂ ಭಯಗ್ರಸ್ತನಾಗಿಯೇ ಉಳಿಯುತ್ತಾನೆ.
23 1ಆಗ ಯೋಬನು ಉತ್ತರಿಸಿದನು: 2“ಇಂದಿಗೂ ನನ್ನ ದೂರು ಕಹಿಯಾಗಿದೆ; ನಾನು ನರಳುತ್ತಿದ್ದರೂ ಅವರ ಕೈ ಭಾರವಾಗಿದೆ. 3ಅವರನ್ನು ಎಲ್ಲಿ ಕಂಡುಕೊಳ್ಳಬೇಕೆಂದು ನನಗೆ ತಿಳಿದಿದ್ದರೆ, ನಾನು ಅವರ ವಾಸಸ್ಥಾನಕ್ಕೆ ಬರಬಹುದಿತ್ತು! 4ಅವರ ಮುಂದೆ ನನ್ನ ವ್ಯಾಜ್ಯವನ್ನು ಮಂಡಿಸುತ್ತಿದ್ದೆ, ನನ್ನ ಬಾಯಿಯನ್ನು ವಾದಗಳಿಂದ ತುಂಬಿಸುತ್ತಿದ್ದೆ. 5ಅವರು ನನಗೆ ಕೊಡುವ ಉತ್ತರದ ಮಾತುಗಳನ್ನು ನಾನು ತಿಳಿದುಕೊಳ್ಳುತ್ತಿದ್ದೆ, ಅವರು ನನಗೆ ಹೇಳುವುದನ್ನು ಗ್ರಹಿಸುತ್ತಿದ್ದೆ. 6ಅವರು ತಮ್ಮ ಮಹಾಶಕ್ತಿಯಿಂದ ನನ್ನೊಡನೆ ವಾದಿಸುತ್ತಾರೋ? ಇಲ್ಲ—ಅವರು ಖಂಡಿತವಾಗಿ ನನ್ನ ಮಾತಿಗೆ ಕಿವಿಗೊಡುತ್ತಾರೆ. 7ಅಲ್ಲಿ ಯಥಾರ್ಥವಂತನು ಅವರೊಡನೆ ವಾದಿಸಬಹುದಿತ್ತು, ನನ್ನ ನ್ಯಾಯಾಧಿಪತಿಯಿಂದ ನಾನು ಸದಾಕಾಲ ನಿರ್ದೋಷಿ ಎಂದು ತೀರ್ಪು ಪಡೆಯುತ್ತಿದ್ದೆ. 8ಆದರೆ ನಾನು ಪೂರ್ವಕ್ಕೆ ಹೋದರೆ, ಅವರು ಅಲ್ಲಿ ಇಲ್ಲ; ಪಶ್ಚಿಮಕ್ಕೆ ಹೋದರೆ ಅವರನ್ನು ಕಾಣೆನು. 9ಅವರು ಉತ್ತರದಲ್ಲಿ ಕೆಲಸ ಮಾಡುತ್ತಿರುವಾಗ ಅವರನ್ನು ನಾನು ನೋಡಲಾರೆನು; ಅವರು ದಕ್ಷಿಣಕ್ಕೆ ತಿರುಗುವಾಗ ಅವರನ್ನು ಕಾಣಲಾರೆನು. 10ಆದರೆ ನಾನು ನಡೆಯುವ ಮಾರ್ಗವನ್ನು ಅವರು ಬಲ್ಲರು; ಅವರು ನನ್ನನ್ನು ಪರೀಕ್ಷಿಸಿದಾಗ ನಾನು ಚಿನ್ನದಂತೆ ಹೊರಬರುವೆನು. 11ನನ್ನ ಪಾದವು ಅವರ ಹೆಜ್ಜೆಗಳನ್ನು ಬಿಡದೆ ಹಿಡಿದಿದೆ; ಅವರ ಮಾರ್ಗವನ್ನು ನಾನು ಕೈಕೊಂಡು ಓರೆಯಾಗಿ ಹೋಗಲಿಲ್ಲ. 12ಅವರ ತುಟಿಗಳ ಆಜ್ಞೆಯಿಂದ ನಾನು ತೊಲಗಲಿಲ್ಲ; ಅವರ ಬಾಯಿಯ ಮಾತುಗಳನ್ನು ನನ್ನ ದಿನದ ಆಹಾರಕ್ಕಿಂತಲೂ ಹೆಚ್ಚಾಗಿ ಅಮೂಲ್ಯವಾಗಿ ಕಾದಿಟ್ಟುಕೊಂಡಿದ್ದೇನೆ. 13ಆದರೆ ಅವರು ಬದಲಾಗದವರು—ಅವರನ್ನು ಹಿಂದಕ್ಕೆ ತಿರುಗಿಸಬಲ್ಲವರು ಯಾರು? ಅವರು ಏನನ್ನು ಬಯಸುತ್ತಾರೋ ಅದನ್ನೇ ಮಾಡುತ್ತಾರೆ. 14ಅವರು ನನಗಾಗಿ ನೇಮಿಸಿರುವುದನ್ನು ನೆರವೇರಿಸುತ್ತಾರೆ, ಅಂಥ ಅನೇಕ ಸಂಗತಿಗಳು ಅವರ ಮನಸ್ಸಿನಲ್ಲಿವೆ. 15ಆದ್ದರಿಂದ ನಾನು ಅವರ ಮುಂದೆ ಭಯಭೀತನಾಗಿದ್ದೇನೆ; ಇದನ್ನು ಯೋಚಿಸಿದಾಗ ಅವರ ವಿಷಯದಲ್ಲಿ ನಾನು ನಡುಗುತ್ತೇನೆ. 16ದೇವರು ನನ್ನ ಹೃದಯವನ್ನು ಕುಗ್ಗಿಸಿದ್ದಾರೆ; ಸರ್ವಶಕ್ತರು ನನ್ನನ್ನು ಭಯಗೊಳಿಸಿದ್ದಾರೆ. 17ಆದರೂ ಕತ್ತಲೆಯು ನನ್ನನ್ನು ಮೌನಗೊಳಿಸಿಲ್ಲ, ನನ್ನ ಮುಖವನ್ನು ಮುಚ್ಚುವ ಕಾರ್ಗತ್ತಲೆಯೂ ಮೌನಗೊಳಿಸಿಲ್ಲ.”