ಚೋಫರನ ಉತ್ತರ
ಚೋಫರನು ಎಲ್ಲರಿಗಿಂತ ಕಠಿಣನಾಗಿ ಮಾತನಾಡುತ್ತಾನೆ: ಯೋಬನು ಅತಿಯಾಗಿ ಮಾತನಾಡುತ್ತಾನೆ, ಮತ್ತು ದೇವರು ಅವನ ಅಪರಾಧಕ್ಕೆ ತಕ್ಕದ್ದಕ್ಕಿಂತ ಕಡಿಮೆಯೇ ಅವನ ಮೇಲೆ ಹೊರಿಸಿದ್ದಾರೆ. ನಿನ್ನ ಗುಡಾರಗಳಿಂದ ಪಾಪವನ್ನು ತೊಲಗಿಸು, ಆಗ ನಿನ್ನ ಜೀವನವು ಮಧ್ಯಾಹ್ನಕ್ಕಿಂತ ಪ್ರಕಾಶಮಾನವಾಗುವುದು ಎನ್ನುತ್ತಾನೆ. ಅವನಿಗೆ ಸ್ವಲ್ಪವೂ ಸಂದೇಹವಿಲ್ಲ, ಮತ್ತು ಅವನು ಇದನ್ನು ಹೇಳುತ್ತಿರುವುದು ನಿರಪರಾಧಿಯಾದ ಮನುಷ್ಯನಿಗೆ.
11 1ಆಗ ನಾಮಾಥ್ಯನಾದ ಚೋಫರನು ಉತ್ತರಿಸಿದನು: 2“ಈ ಮಾತುಗಳ ಪ್ರವಾಹಕ್ಕೆ ಉತ್ತರ ಸಿಗಬಾರದೋ? ಇಷ್ಟೊಂದು ಮಾತನಾಡುವವನು ನೀತಿವಂತನೆಂದು ನಿರ್ಣಯಿಸಲ್ಪಡಬೇಕೋ? 3ನಿನ್ನ ವ್ಯರ್ಥ ಮಾತು ಇತರರನ್ನು ಮೌನಗೊಳಿಸಬೇಕೋ? ನಿನ್ನನ್ನು ನಾಚಿಕೆಪಡಿಸುವವರು ಯಾರೂ ಇಲ್ಲದಿರುವಾಗ ನೀನು ಅಪಹಾಸ್ಯಮಾಡುತ್ತೀಯಾ? 4ಏಕೆಂದರೆ, ‘ನನ್ನ ಬೋಧನೆ ಶುದ್ಧವಾಗಿದೆ, ನಿಮ್ಮ ದೃಷ್ಟಿಯಲ್ಲಿ ನಾನು ನಿರ್ಮಲನು’ ಎಂದು ನೀನು ಹೇಳುತ್ತೀ. 5ಆದರೆ ಆಹಾ, ದೇವರು ಮಾತನಾಡಿ ನಿನಗೆ ವಿರುದ್ಧವಾಗಿ ತಮ್ಮ ತುಟಿಗಳನ್ನು ತೆರೆದರೆ ಎಷ್ಟೋ ಚೆನ್ನಾಗಿತ್ತು, 6ಜ್ಞಾನದ ರಹಸ್ಯಗಳನ್ನು ನಿನಗೆ ತಿಳಿಸಿದರೆ ಎಷ್ಟೋ ಚೆನ್ನಾಗಿತ್ತು—ಏಕೆಂದರೆ ನಿಜವಾದ ಜ್ಞಾನಕ್ಕೆ ಎರಡು ಮುಖಗಳಿವೆ. ಹಾಗಾದರೆ ತಿಳಿದುಕೊ, ನಿನ್ನ ಅಪರಾಧಕ್ಕೆ ತಕ್ಕದ್ದಕ್ಕಿಂತ ಕಡಿಮೆಯಾಗಿಯೇ ದೇವರು ನಿನ್ನನ್ನು ದಂಡಿಸಿದ್ದಾರೆ. 7ದೇವರ ಆಳವಾದ ವಿಷಯಗಳನ್ನು ನೀನು ಗ್ರಹಿಸಬಲ್ಲೆಯಾ? ಸರ್ವಶಕ್ತನ ಮೇರೆಯನ್ನು ನೀನು ಕಂಡುಹಿಡಿಯಬಲ್ಲೆಯಾ? 8ಅವು ಆಕಾಶಕ್ಕಿಂತ ಉನ್ನತವಾಗಿವೆ—ನೀನೇನು ಮಾಡಬಲ್ಲೆ? ಪಾತಾಳಕ್ಕಿಂತ ಆಳವಾಗಿವೆ—ನೀನೇನು ತಿಳಿಯಬಲ್ಲೆ? 9ಅವುಗಳ ಅಳತೆ ಭೂಮಿಗಿಂತ ಉದ್ದವಾಗಿದೆ, ಸಮುದ್ರಕ್ಕಿಂತ ಅಗಲವಾಗಿದೆ. 10ಅವರು ಹಾದುಹೋಗಿ ಸೆರೆಹಿಡಿದು ನ್ಯಾಯವಿಚಾರಣೆಗೆ ಕರೆದರೆ, ಅವರನ್ನು ತಡೆಯಬಲ್ಲವರು ಯಾರು? 11ಏಕೆಂದರೆ ಅವರು ನಿಷ್ಪ್ರಯೋಜಕ ಜನರನ್ನು ಬಲ್ಲರು; ಅಧರ್ಮವನ್ನು ಕಂಡಾಗ ಅವರು ಅದನ್ನು ಗಮನಿಸದಿರುವರೇ? 12ಆದರೆ ಕಾಡುಕತ್ತೆಯ ಮರಿ ಮನುಷ್ಯನಾಗಿ ಹುಟ್ಟಿದಾಗಲೇ ಬುದ್ಧಿಹೀನನು ಜ್ಞಾನಿಯಾಗುವನು. 13ನೀನು ನಿನ್ನ ಹೃದಯವನ್ನು ಸಿದ್ಧಪಡಿಸಿ ಅವರ ಕಡೆಗೆ ನಿನ್ನ ಕೈಗಳನ್ನು ಚಾಚಿದರೆ, 14ನಿನ್ನ ಕೈಯಲ್ಲಿ ಪಾಪವಿದ್ದರೆ ಅದನ್ನು ದೂರಮಾಡು, ನಿನ್ನ ಗುಡಾರಗಳಲ್ಲಿ ಅನ್ಯಾಯವು ನೆಲೆಸದಿರಲಿ, 15ಆಗ ನಿಶ್ಚಯವಾಗಿ ನೀನು ನಾಚಿಕೆಯಿಲ್ಲದೆ ನಿನ್ನ ಮುಖವನ್ನು ಎತ್ತುವೆ; ಸ್ಥಿರವಾಗಿ ನಿಂತು ಭಯಪಡದಿರುವೆ. 16ನೀನು ನಿನ್ನ ಸಂಕಟವನ್ನು ಮರೆತುಬಿಡುವೆ; ಹರಿದುಹೋದ ನೀರಿನಂತೆ ಅದನ್ನು ನೆನಪಿಸಿಕೊಳ್ಳುವೆ. 17ನಿನ್ನ ಜೀವನವು ಮಧ್ಯಾಹ್ನಕ್ಕಿಂತ ಪ್ರಕಾಶಮಾನವಾಗಿರುವುದು; ಅದರ ಕತ್ತಲೆಯು ಮುಂಜಾನೆಯಂತಿರುವುದು. 18ನಿರೀಕ್ಷೆ ಇರುವುದರಿಂದ ನೀನು ಸುರಕ್ಷಿತನೆಂದು ಭಾವಿಸುವೆ; ಸುತ್ತಲೂ ನೋಡಿ ನಿರ್ಭಯವಾಗಿ ಮಲಗಿಕೊಳ್ಳುವೆ. 19ನಿನ್ನನ್ನು ಭಯಪಡಿಸುವವರು ಯಾರೂ ಇಲ್ಲದೆ ನೀನು ಮಲಗಿಕೊಳ್ಳುವೆ, ಅನೇಕರು ನಿನ್ನ ದಯೆಯನ್ನು ಹುಡುಕುವರು. 20ಆದರೆ ದುಷ್ಟರ ಕಣ್ಣುಗಳು ಕ್ಷೀಣಿಸುವುವು; ಅವರಿಗೆ ಯಾವ ತಪ್ಪಿಸಿಕೊಳ್ಳುವ ದಾರಿಯೂ ಇಲ್ಲದಂತಾಗುವುದು, ಕೊನೆಯುಸಿರೆಳೆಯುವುದೊಂದೇ ಅವರ ನಿರೀಕ್ಷೆ.”