ಎಲೀಹು ಪುನಃ ಮಾತನಾಡುತ್ತಾನೆ
ಮೋಡಗಳಿಗಿಂತಲೂ ಉನ್ನತರಾದ ದೇವರಿಗೆ ಮನುಷ್ಯನ ಪಾಪವಾಗಲಿ ಒಳ್ಳೆಯತನವಾಗಲಿ ಏನನ್ನೂ ಬದಲಾಯಿಸುವುದಿಲ್ಲ, ಅವು ಇತರ ಜನರ ಮೇಲೆ ಬೀಳುತ್ತವೆ ಎಂದು ಎಲೀಹು ವಾದಿಸುತ್ತಾನೆ. ದಬ್ಬಾಳಿಕೆಗೊಳಗಾದವರು ಮೊರೆಯಿಡುತ್ತಾರೆ, ಆದರೆ ರಾತ್ರಿಯಲ್ಲಿ ಹಾಡುಗಳನ್ನು ಕೊಡುವ ತಮ್ಮ ಸೃಷ್ಟಿಕರ್ತನು ಎಲ್ಲಿ ಎಂದು ಯಾರೂ ಕೇಳುವುದಿಲ್ಲ. ಆದ್ದರಿಂದ ಯೋಬನು ತಿಳುವಳಿಕೆಯಿಲ್ಲದೆ ಮಾತುಗಳನ್ನು ಹೆಚ್ಚಿಸುತ್ತಾನೆ.
35 1ಆಗ ಎಲೀಹು ಮುಂದುವರಿಸಿ ಹೀಗೆಂದನು: 2“ಇದು ನ್ಯಾಯವೆಂದು ನೀನು ಭಾವಿಸುತ್ತೀಯಾ? ‘ನನ್ನ ನ್ಯಾಯನೀತಿ ದೇವರ ನ್ಯಾಯನೀತಿಗಿಂತ ಹೆಚ್ಚು’ ಎಂದು ನೀನು ಹೇಳುತ್ತೀ. 3‘ಇದರಿಂದ ನಿನಗೇನು ಪ್ರಯೋಜನ? ಪಾಪಮಾಡದಿರುವುದರಿಂದ ನನಗೇನು ಲಾಭ?’ ಎಂದು ನೀನು ಕೇಳುತ್ತೀ. 4ನಾನು ನಿನಗೂ ನಿನ್ನ ಜೊತೆಯಿರುವ ನಿನ್ನ ಸ್ನೇಹಿತರಿಗೂ ಉತ್ತರಕೊಡುತ್ತೇನೆ. 5ಆಕಾಶದ ಕಡೆಗೆ ಕಣ್ಣೆತ್ತಿ ನೋಡು; ನಿನಗಿಂತ ಎತ್ತರದಲ್ಲಿರುವ ಮೋಡಗಳನ್ನು ದಿಟ್ಟಿಸಿ ನೋಡು. 6ನೀನು ಪಾಪಮಾಡಿದರೆ ಅವರಿಗೆ ವಿರೋಧವಾಗಿ ಏನನ್ನು ಸಾಧಿಸುತ್ತೀ? ನಿನ್ನ ದ್ರೋಹಗಳು ಅಧಿಕವಾಗಿದ್ದರೆ ಅವರಿಗೆ ನೀನೇನು ಮಾಡುತ್ತೀ? 7ನೀನು ನ್ಯಾಯವಂತನಾಗಿದ್ದರೆ ಅವರಿಗೆ ಏನನ್ನು ಕೊಡುತ್ತೀ? ಅಥವಾ ನಿನ್ನ ಕೈಯಿಂದ ಅವರು ಏನನ್ನು ಸ್ವೀಕರಿಸುತ್ತಾರೆ? 8ನಿನ್ನ ದುಷ್ಟತನವು ನಿನ್ನಂಥ ಮನುಷ್ಯನ ಮೇಲೆ ಮಾತ್ರ ಪರಿಣಾಮ ಬೀರುತ್ತದೆ, ನಿನ್ನ ನ್ಯಾಯನೀತಿಯು ಸಹಮನುಷ್ಯನ ಮೇಲೆ ಮಾತ್ರ. 9ಅನೇಕ ದಬ್ಬಾಳಿಕೆಗಳ ಭಾರದ ಕೆಳಗೆ ಜನರು ಗೋಳಿಡುತ್ತಾರೆ; ಬಲಿಷ್ಠರ ತೋಳಿನ ವಿರುದ್ಧ ಸಹಾಯಕ್ಕಾಗಿ ಮೊರೆಯಿಡುತ್ತಾರೆ. 10ಆದರೆ ಯಾರೂ ಹೀಗೆನ್ನುವುದಿಲ್ಲ: ‘ನನ್ನ ಸೃಷ್ಟಿಕರ್ತರಾದ ದೇವರು ಎಲ್ಲಿದ್ದಾರೆ? ಅವರು ರಾತ್ರಿಯಲ್ಲಿ ಹಾಡುಗಳನ್ನು ಅನುಗ್ರಹಿಸುತ್ತಾರೆ, 11ಭೂಮಿಯ ಮೃಗಗಳಿಗಿಂತ ಹೆಚ್ಚಾಗಿ ನಮಗೆ ಬೋಧಿಸುತ್ತಾರೆ, ಆಕಾಶದ ಪಕ್ಷಿಗಳಿಗಿಂತ ನಮ್ಮನ್ನು ಜ್ಞಾನಿಗಳನ್ನಾಗಿ ಮಾಡುತ್ತಾರೆ?’ 12ಅಲ್ಲಿ ಜನರು ಮೊರೆಯಿಡುತ್ತಾರೆ, ಆದರೆ ದುಷ್ಟ ಮನುಷ್ಯರ ಗರ್ವದ ನಿಮಿತ್ತ ಅವರು ಉತ್ತರಕೊಡುವುದಿಲ್ಲ. 13ದೇವರು ವ್ಯರ್ಥವಾದ ಮೊರೆಯನ್ನು ಕೇಳುವುದೇ ಇಲ್ಲ; ಸರ್ವಶಕ್ತರು ಅದನ್ನು ಲಕ್ಷಿಸುವುದಿಲ್ಲ. 14ನೀನು ಅವರನ್ನು ಕಾಣುವುದಿಲ್ಲವೆಂದು ಹೇಳುವಾಗ ಅವರು ಎಷ್ಟೋ ಕಡಿಮೆ ಉತ್ತರಿಸುತ್ತಾರೆ— ಆದರೂ ನಿನ್ನ ವ್ಯಾಜ್ಯವು ಅವರ ಮುಂದಿದೆ, ನೀನು ಅವರಿಗಾಗಿ ಕಾಯಬೇಕು. 15ಈಗಲಾದರೋ, ಅವರ ಕೋಪವು ಇನ್ನೂ ಶಿಕ್ಷಿಸಿಲ್ಲವಾದ್ದರಿಂದ, ಅವರು ಮೂರ್ಖತನವನ್ನು ಅಷ್ಟಾಗಿ ಗಮನಿಸಿಲ್ಲವಾದ್ದರಿಂದ. 16ಯೋಬನು ವ್ಯರ್ಥವಾದ ಮಾತಿನಿಂದ ತನ್ನ ಬಾಯಿತೆರೆಯುತ್ತಾನೆ; ಅರಿವಿಲ್ಲದೆ ಮಾತುಗಳನ್ನು ಹೆಚ್ಚಿಸುತ್ತಾನೆ.”