ದೇವರ ಪರವಾಗಿ ಹೇಳಬೇಕಾದ ಮಾತುಗಳು
ಎಲೀಹು ದೇವರ ಪರವಾಗಿ ಮಾತನಾಡುತ್ತಾನೆ: ಸಂಕಟವು ಒಂದು ಬೋಧನೆ, ಕಿವಿಯನ್ನು ತೆರೆಯುವ ಕಾರ್ಯ; ಯೋಬನನ್ನು ವಿಶಾಲವಾದ ಸ್ಥಳಕ್ಕೆ ಸೆಳೆದುಕೊಳ್ಳಬಹುದಾಗಿತ್ತು. ಆಮೇಲೆ ಅವನ ಧ್ವನಿ ವಿಸ್ಮಯಕ್ಕೆ ತಿರುಗುತ್ತದೆ: ಮಂಜಿನಿಂದ ಇಳಿಯುವ ಮಳೆ, ಗುಡುಗು, ಗುರಿಗೆ ಗುರಿಯಿಟ್ಟ ಮಿಂಚು. ದೇವರು ಮಹಾನ್, ನಾವು ಆತನನ್ನು ಅರಿಯೆವು.
36 1ಎಲೀಹು ಮಾತು ಮುಂದುವರಿಸಿ ಹೀಗೆಂದನು: 2“ಸ್ವಲ್ಪ ನನ್ನೊಂದಿಗೆ ತಾಳ್ಮೆಯಿಂದಿರು, ನಾನು ನಿನಗೆ ತೋರಿಸುತ್ತೇನೆ; ಏಕೆಂದರೆ ದೇವರ ಪರವಾಗಿ ಹೇಳಬೇಕಾದ ಮಾತುಗಳು ಇನ್ನೂ ಇವೆ. 3ನನ್ನ ತಿಳಿವಳಿಕೆಯನ್ನು ದೂರದಿಂದ ತರುತ್ತೇನೆ, ನನ್ನ ಸೃಷ್ಟಿಕರ್ತರಿಗೆ ನ್ಯಾಯನೀತಿಯನ್ನು ಸಲ್ಲಿಸುತ್ತೇನೆ. 4ನಿಜವಾಗಿಯೂ ನನ್ನ ಮಾತುಗಳು ಸುಳ್ಳಲ್ಲ; ತಿಳಿವಳಿಕೆಯಲ್ಲಿ ಪರಿಪೂರ್ಣನಾದವನು ನಿನ್ನ ಬಳಿ ಇದ್ದಾನೆ. 5ನೋಡು, ದೇವರು ಪರಾಕ್ರಮಶಾಲಿ, ಆದರೂ ಅವರು ಯಾರನ್ನೂ ತಿರಸ್ಕರಿಸುವುದಿಲ್ಲ; ಬುದ್ಧಿಶಕ್ತಿಯಲ್ಲಿ ಅವರು ಬಲಿಷ್ಠರು. 6ಅವರು ದುಷ್ಟರನ್ನು ಜೀವದಿಂದುಳಿಸುವುದಿಲ್ಲ, ಆದರೆ ಕುಗ್ಗಿದವರಿಗೆ ನ್ಯಾಯವನ್ನು ದೊರಕಿಸುತ್ತಾರೆ. 7ಅವರು ನೀತಿವಂತರಿಂದ ತಮ್ಮ ಕಣ್ಣುಗಳನ್ನು ಎಂದಿಗೂ ತೆಗೆಯುವುದಿಲ್ಲ; ಅರಸರೊಂದಿಗೆ ಅವರನ್ನು ಸಿಂಹಾಸನಗಳ ಮೇಲೆ ಸದಾಕಾಲ ಕುಳ್ಳಿರಿಸುತ್ತಾರೆ, ಅವರು ಉನ್ನತಿಗೇರುತ್ತಾರೆ. 8ಅವರು ಸಂಕೋಲೆಗಳಿಂದ ಬಂಧಿತರಾಗಿ, ಸಂಕಟದ ಹಗ್ಗಗಳಿಂದ ಬಿಗಿಯಾಗಿ ಕಟ್ಟಲ್ಪಟ್ಟರೆ, 9ಆಗ ಅವರಿಗೆ ಅವರ ಕೃತ್ಯಗಳನ್ನೂ ಅವರ ದ್ರೋಹಗಳನ್ನೂ, ಅವರು ಅಹಂಕಾರದಿಂದ ನಡೆದುಕೊಂಡಿದ್ದಾರೆಂದು ತಿಳಿಸುತ್ತಾರೆ. 10ಅವರ ಕಿವಿಯನ್ನು ಉಪದೇಶಕ್ಕೆ ತೆರೆಯುತ್ತಾರೆ, ಪಾಪದಿಂದ ಹಿಂತಿರುಗಬೇಕೆಂದು ಆಜ್ಞಾಪಿಸುತ್ತಾರೆ. 11ಅವರು ಕೇಳಿ ದೇವರನ್ನು ಸೇವಿಸಿದರೆ, ಅವರು ತಮ್ಮ ದಿನಗಳನ್ನು ಏಳಿಗೆಯಲ್ಲಿ ಕಳೆಯುತ್ತಾರೆ, ಅವರ ವರ್ಷಗಳು ಸುಖವಾಗಿ ಕಳೆಯುತ್ತವೆ. 12ಆದರೆ ಅವರು ಕೇಳದಿದ್ದರೆ, ಕತ್ತಿಯಿಂದ ನಾಶವಾಗುತ್ತಾರೆ, ತಿಳಿವಳಿಕೆಯಿಲ್ಲದೆ ಸಾಯುತ್ತಾರೆ. 13ಹೃದಯದಲ್ಲಿ ಭಕ್ತಿಹೀನರಾದವರು ಕೋಪವನ್ನು ಇಟ್ಟುಕೊಳ್ಳುತ್ತಾರೆ; ಅವರನ್ನು ದೇವರು ಬಂಧಿಸಿದಾಗಲೂ ಅವರು ಸಹಾಯಕ್ಕಾಗಿ ಕೂಗುವುದಿಲ್ಲ. 14ಅವರ ಪ್ರಾಣವು ಯೌವನದಲ್ಲಿಯೇ ಸಾಯುತ್ತದೆ, ಅವರ ಜೀವವು ಅಪವಿತ್ರ ವೇಶ್ಯೆಯರ ನಡುವೆ ಕೊನೆಗೊಳ್ಳುತ್ತದೆ. 15ಕುಗ್ಗಿದವರನ್ನು ಅವರ ಸಂಕಟದ ಮೂಲಕವೇ ದೇವರು ಬಿಡಿಸುತ್ತಾರೆ, ಕಷ್ಟದ ಮೂಲಕ ಅವರ ಕಿವಿಯನ್ನು ತೆರೆಯುತ್ತಾರೆ. 16ಸಂಕಟದ ದವಡೆಗಳಿಂದ ನಿನ್ನನ್ನೂ ಅವರು ಹೊರಗೆ ಸೆಳೆದು, ಯಾವ ತಡೆಯೂ ಇಲ್ಲದ ವಿಶಾಲವಾದ, ಮುಕ್ತ ಸ್ಥಳಕ್ಕೆ ನಡೆಸುತ್ತಿದ್ದರು, ನಿನ್ನ ಊಟದ ಮೇಜು ಸಮೃದ್ಧಿಯಿಂದ ತುಂಬಿರುತ್ತಿತ್ತು. 17ಆದರೆ ದುಷ್ಟರಿಗೆ ತಕ್ಕ ದಂಡನೆಯಿಂದ ನೀನು ತುಂಬಿಹೋಗಿರುವೆ; ದಂಡನೆಯೂ ನ್ಯಾಯತೀರ್ಪೂ ನಿನ್ನನ್ನು ಹಿಡಿದಿವೆ. 18ಕೋಪವು ನಿನ್ನನ್ನು ಪರಿಹಾಸಕ್ಕೆ ಪ್ರೇರೇಪಿಸದಂತೆ ಎಚ್ಚರಿಕೆಯಾಗಿರು, ದೊಡ್ಡ ಈಡುಹಣವು ನಿನ್ನನ್ನು ದಾರಿತಪ್ಪಿಸದಿರಲಿ. 19ನಿನ್ನ ಸಹಾಯಕ್ಕಾಗಿನ ಕೂಗಾಗಲಿ ನಿನ್ನ ಸಕಲ ಬಲಪರಾಕ್ರಮಗಳಾಗಲಿ ಸಂಕಟದಿಂದ ನಿನ್ನನ್ನು ತಪ್ಪಿಸಬಲ್ಲವೇ? 20ರಾತ್ರಿಗಾಗಿ ಹಂಬಲಿಸಬೇಡ, ಆ ರಾತ್ರಿಯಲ್ಲಿ ಜನಗಳು ತಮ್ಮ ಸ್ಥಳದಿಂದ ಕಡಿದುಹಾಕಲ್ಪಡುತ್ತಾರೆ. 21ಎಚ್ಚರಿಕೆಯಾಗಿರು; ಪಾಪದ ಕಡೆಗೆ ತಿರುಗಬೇಡ, ಏಕೆಂದರೆ ಸಂಕಟಕ್ಕಿಂತ ಇದನ್ನೇ ನೀನು ಆರಿಸಿಕೊಂಡಿರುವೆ. 22ನೋಡು, ದೇವರು ತಮ್ಮ ಶಕ್ತಿಯಲ್ಲಿ ಉನ್ನತೋನ್ನತರು; ಅವರಂತಹ ಬೋಧಕನು ಯಾರಿದ್ದಾನೆ?
23“ಅವರ ಮಾರ್ಗವನ್ನು ಅವರಿಗೆ ವಿಧಿಸಿದವನು ಯಾರು, ಇಲ್ಲವೆ ‘ನೀವು ಅನ್ಯಾಯ ಮಾಡಿದ್ದೀರಿ’ ಎಂದು ಹೇಳಬಲ್ಲವನು ಯಾರು? 24ಅವರ ಕಾರ್ಯವನ್ನು ಕೊಂಡಾಡುವುದಕ್ಕೆ ಮರೆಯಬೇಡ, ಅದನ್ನು ಜನರು ಹಾಡಿನಲ್ಲಿ ಸ್ತುತಿಸಿದ್ದಾರೆ. 25ಮನುಷ್ಯರೆಲ್ಲರೂ ಅದನ್ನು ನೋಡಿದ್ದಾರೆ; ಮಾನವರು ಅದನ್ನು ದೂರದಿಂದ ಕಾಣುತ್ತಾರೆ. 26ನೋಡು, ದೇವರು ಮಹೋನ್ನತರು, ಅವರನ್ನು ನಾವು ಅರಿಯೆವು; ಅವರ ವರ್ಷಗಳ ಸಂಖ್ಯೆಯನ್ನು ಶೋಧಿಸಲಾಗದು. 27ಅವರು ನೀರಿನ ಹನಿಗಳನ್ನು ಮೇಲಕ್ಕೆ ಎಳೆಯುತ್ತಾರೆ; ಅವು ಅವರ ಮಂಜಿನಿಂದ ಮಳೆಯಾಗಿ ಸುರಿಯುತ್ತವೆ, 28ಆ ಮಳೆಯನ್ನು ಮೋಡಗಳು ಸುರಿಸಿ ಮನುಷ್ಯರ ಮೇಲೆ ಹೇರಳವಾಗಿ ಸುರಿಸುತ್ತವೆ. 29ಮೋಡಗಳ ಹರಡುವಿಕೆಯನ್ನೂ ಅವರ ಮಂಟಪದ ಗುಡುಗನ್ನೂ ಯಾರಾದರೂ ಗ್ರಹಿಸಬಲ್ಲರೇ? 30ನೋಡು, ಅವರು ತಮ್ಮ ಮಿಂಚನ್ನು ತಮ್ಮ ಸುತ್ತಲೂ ಚದರಿಸುತ್ತಾರೆ, ಸಮುದ್ರದ ಆಳಗಳನ್ನು ಮುಚ್ಚುತ್ತಾರೆ. 31ಇವುಗಳ ಮೂಲಕ ಅವರು ಜನಾಂಗಗಳನ್ನು ಆಳುತ್ತಾರೆ; ಹೇರಳವಾಗಿ ಆಹಾರವನ್ನು ಕೊಡುತ್ತಾರೆ. 32ಅವರು ತಮ್ಮ ಕೈಗಳನ್ನು ಮಿಂಚಿನಿಂದ ತುಂಬಿಸುತ್ತಾರೆ, ಗುರಿಯನ್ನು ಹೊಡೆಯಬೇಕೆಂದು ಅದಕ್ಕೆ ಆಜ್ಞಾಪಿಸುತ್ತಾರೆ. 33ಅದರ ಗರ್ಜನೆಯು ಅವರ ವಿಷಯವಾಗಿ ತಿಳಿಸುತ್ತದೆ; ಬಿರುಗಾಳಿ ಬರುತ್ತಿರುವುದನ್ನು ದನಕರುಗಳು ಸಹ ಗ್ರಹಿಸುತ್ತವೆ.”