ನಮ್ಮ ತಂದೆ ಒಳ್ಳೆಯವರು
ಆಸಾಫನ ಕೀರ್ತನೆ.
ಆರೋಗ್ಯವಂತರೂ ಅಹಂಕಾರಿಗಳೂ ಆದ ಐಶ್ವರ್ಯವಂತರ ಮೇಲೆ ಹೊಟ್ಟೆಕಿಚ್ಚುಪಟ್ಟು ಆಸಾಫನು ಬಹುತೇಕ ಕಾಲುಜಾರಿದನು. ಅವನು ಪವಿತ್ರಾಲಯದೊಳಗೆ ಹೋಗಿ ಅವರ ಅಂತ್ಯ ಎಲ್ಲಿ ಎಂದು ಕಾಣುವವರೆಗೆ ಯಾವುದೂ ಬಗೆಹರಿಯಲಿಲ್ಲ. ತಾನು ಪಶುವಿನಂತೆ ಇದ್ದೆನೆಂದು ಅವನು ಒಪ್ಪಿಕೊಳ್ಳುತ್ತಾನೆ, ಮತ್ತು ತಾನು ಬಯಸಿದ್ದು ಈಗಾಗಲೇ ತನ್ನ ಬಳಿ ಇದೆ ಎಂದು ಕಂಡುಕೊಳ್ಳುತ್ತಾನೆ: ತನ್ನ ಕೈಯನ್ನು ಬಿಗಿಯಾಗಿ ಹಿಡಿದಿರುವ ತನ್ನ ತಂದೆಯ ಕೈ.
73 1ನಿಜವಾಗಿಯೂ ನಮ್ಮ ತಂದೆ ಇಸ್ರಾಯೇಲಿಗೆ, ಹೃದಯಶುದ್ಧರಾಗಿರುವವರಿಗೆ ಒಳ್ಳೆಯವರು.
2ಆದರೆ ನನ್ನ ವಿಷಯವಾದರೋ, ನನ್ನ ಪಾದಗಳು ಬಹುಮಟ್ಟಿಗೆ ಎಡವಿದ್ದವು; ನನ್ನ ಹೆಜ್ಜೆಗಳು ಬಹುತೇಕ ಜಾರಿದ್ದವು. 3ದುಷ್ಟರ ಏಳಿಗೆಯನ್ನು ಕಂಡಾಗ ನಾನು ಅಹಂಕಾರಿಗಳ ವಿಷಯದಲ್ಲಿ ಅಸೂಯೆಪಟ್ಟೆನು. 4ಏಕೆಂದರೆ ಅವರಿಗೆ ಸಾಯುವಾಗ ಯಾವ ನೋವೂ ಇರುವುದಿಲ್ಲ; ಅವರ ದೇಹಗಳು ಆರೋಗ್ಯವಾಗಿಯೂ ಪುಷ್ಟಿಯಾಗಿಯೂ ಇವೆ. 5ಬೇರೆಯವರಂತೆ ಅವರು ಕಷ್ಟದಲ್ಲಿ ಇಲ್ಲ; ಉಳಿದ ಮನುಷ್ಯರಂತೆ ಅವರು ಬಾಧೆಗೆ ಗುರಿಯಾಗುವುದಿಲ್ಲ. 6ಆದ್ದರಿಂದ ಗರ್ವವೇ ಅವರ ಕಂಠಮಾಲೆ; ಹಿಂಸೆಯೇ ವಸ್ತ್ರದಂತೆ ಅವರನ್ನು ಆವರಿಸುತ್ತದೆ. 7ಕೊಬ್ಬಿನಿಂದ ಅವರ ಕಣ್ಣುಗಳು ಉಬ್ಬಿಕೊಂಡಿವೆ; ಅವರ ಹೃದಯದ ಕಲ್ಪನೆಗಳು ಮೇರೆಮೀರಿ ಹರಿದಾಡುತ್ತವೆ. 8ಅವರು ಗೇಲಿಮಾಡಿ ಕೇಡಿನಿಂದ ಮಾತನಾಡುತ್ತಾರೆ; ಉನ್ನತದಿಂದ ಅವರು ದಬ್ಬಾಳಿಕೆಯ ಬೆದರಿಕೆ ಹಾಕುತ್ತಾರೆ. 9ಅವರು ತಮ್ಮ ಬಾಯನ್ನು ಆಕಾಶಗಳಿಗೆ ವಿರೋಧವಾಗಿ ಇಡುತ್ತಾರೆ, ಅವರ ನಾಲಿಗೆ ಭೂಮಿಯಲ್ಲೆಲ್ಲಾ ಅಹಂಕಾರದಿಂದ ಸಂಚರಿಸುತ್ತದೆ. 10ಆದ್ದರಿಂದ ಆತನ ಜನರು ಅವರ ಕಡೆಗೆ ಹಿಂತಿರುಗುತ್ತಾರೆ, ಹೇರಳವಾದ ನೀರನ್ನು ಕುಡಿದುಬಿಡುತ್ತಾರೆ. 11ಅವರು, “ದೇವರಿಗೆ ಹೇಗೆ ತಿಳಿಯುತ್ತದೆ? ಪರಾತ್ಪರನಲ್ಲಿ ಜ್ಞಾನ ಉಂಟೋ?” ಎಂದು ಹೇಳುತ್ತಾರೆ. 12ನೋಡಿ—ಇವರೇ ದುಷ್ಟರು; ಯಾವಾಗಲೂ ನೆಮ್ಮದಿಯಲ್ಲಿದ್ದು ಐಶ್ವರ್ಯದಲ್ಲಿ ವೃದ್ಧಿಯಾಗುತ್ತಾರೆ.
13ನಿಶ್ಚಯವಾಗಿ ನಾನು ವ್ಯರ್ಥವಾಗಿ ನನ್ನ ಹೃದಯವನ್ನು ಶುದ್ಧವಾಗಿ ಕಾಪಾಡಿಕೊಂಡೆನು, ನಿರ್ದೋಷದಲ್ಲಿ ನನ್ನ ಕೈಗಳನ್ನು ತೊಳೆದುಕೊಂಡೆನು. 14ಏಕೆಂದರೆ ದಿನವೆಲ್ಲಾ ನಾನು ಬಾಧೆಗೆ ಒಳಗಾದೆನು, ಪ್ರತಿ ಮುಂಜಾನೆ ಗದರಿಕೆಗೆ ಗುರಿಯಾದೆನು.
15ನಾನು, “ಹೀಗೆ ಮಾತನಾಡುವೆನು,” ಎಂದು ಹೇಳಿದ್ದರೆ, ನಿಮ್ಮ ಮಕ್ಕಳ ಸಂತತಿಗೆ ದ್ರೋಹಮಾಡಿದಂತಾಗುತ್ತಿತ್ತು. 16ಇದೆಲ್ಲವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ, ಅದು ನನ್ನ ದೃಷ್ಟಿಯಲ್ಲಿ ಆಯಾಸಕರ ಕಾರ್ಯವಾಗಿತ್ತು, 17ನಮ್ಮ ತಂದೆಯ ಪವಿತ್ರಸ್ಥಾನದೊಳಗೆ ನಾನು ಹೋಗುವ ತನಕ; ಆಗ ಅವರ ಅಂತ್ಯ ನನಗೆ ಅರ್ಥವಾಯಿತು. 18ನಿಜವಾಗಿ ನೀವು ಅವರನ್ನು ಜಾರುವ ಸ್ಥಳಗಳಲ್ಲಿ ನಿಲ್ಲಿಸುತ್ತೀರಿ; ನೀವು ಅವರನ್ನು ನಾಶಕ್ಕೆ ಬೀಳಿಸುತ್ತೀರಿ. 19ಕ್ಷಣಮಾತ್ರದಲ್ಲಿ ಅವರು ಹೇಗೆ ನಾಶವಾಗುತ್ತಾರೆ, ಭೀಕರತೆಗಳಿಂದ ಸಂಪೂರ್ಣವಾಗಿ ಕೊಚ್ಚಿಹೋಗುತ್ತಾರೆ! 20ಒಬ್ಬನು ಎಚ್ಚರಗೊಂಡಾಗ ಕಾಣುವ ಕನಸಿನಂತೆ, ಓ ಸಾರ್ವಭೌಮ ತಂದೆಯೇ, ನೀವು ಎದ್ದಾಗ, ಅವರನ್ನು ಮಾಯೆಗಳಂತೆ ತಿರಸ್ಕರಿಸುವಿರಿ.
21ನನ್ನ ಹೃದಯ ಕಹಿಯಾದಾಗ, ನನ್ನ ಅಂತರಂಗದಲ್ಲಿ ನಾನು ಇರಿಯಲ್ಪಟ್ಟಾಗ, 22ನಾನು ಬುದ್ಧಿಹೀನನೂ ಅಜ್ಞಾನಿಯೂ ಆಗಿದ್ದೆನು; ನಿಮ್ಮ ಮುಂದೆ ನಾನು ಮೃಗದಂತಿದ್ದೆನು. 23ಆದಾಗ್ಯೂ, ನಾನು ನಿರಂತರವಾಗಿ ನಿಮ್ಮೊಂದಿಗೆ ಇದ್ದೇನೆ; ನೀವು ನನ್ನ ಬಲಗೈಯನ್ನು ಹಿಡಿದಿದ್ದೀರಿ. 24ನಿಮ್ಮ ಆಲೋಚನೆಯಿಂದ ನೀವು ನನ್ನನ್ನು ನಡೆಸುತ್ತೀರಿ, ಅನಂತರ ನೀವು ನನ್ನನ್ನು ಮಹಿಮೆಯೊಳಗೆ ಸೇರಿಸಿಕೊಳ್ಳುವಿರಿ. 25ಪರಲೋಕದಲ್ಲಿ ನನಗೆ ಯಾರಿದ್ದಾರೆ, ನಿಮ್ಮ ಹೊರತು? ಭೂಮಿಯಲ್ಲಿ ನಿಮ್ಮ ಹೊರತಾಗಿ ನಾನು ಬಯಸುವುದೇನೂ ಇಲ್ಲ. 26ನನ್ನ ಶರೀರವೂ ನನ್ನ ಹೃದಯವೂ ಕುಂದಿಹೋಗಬಹುದು, ಆದರೆ ನಮ್ಮ ತಂದೆ ನನ್ನ ಹೃದಯದ ಬಲವೂ ಸದಾಕಾಲ ನನ್ನ ಪಾಲೂ ಆಗಿದ್ದಾರೆ.
27ಏಕೆಂದರೆ ನಿಮ್ಮಿಂದ ದೂರವಾಗಿರುವವರು ನಾಶವಾಗುವರು; ನಿಮಗೆ ದ್ರೋಹಮಾಡುವ ಪ್ರತಿಯೊಬ್ಬನನ್ನೂ ನೀವು ನಿರ್ಮೂಲಮಾಡುತ್ತೀರಿ. 28ಆದರೆ ನನ್ನ ಮಟ್ಟಿಗೆ, ನಮ್ಮ ತಂದೆಯ ಸಮೀಪದಲ್ಲಿ ಇರುವುದೇ ಒಳ್ಳೆಯದು; ಸಾರ್ವಭೌಮ ತಂದೆಯನ್ನೇ ನನ್ನ ಆಶ್ರಯವನ್ನಾಗಿ ಮಾಡಿಕೊಂಡಿದ್ದೇನೆ, ಆದ್ದರಿಂದ ನಿಮ್ಮ ಎಲ್ಲಾ ಕಾರ್ಯಗಳನ್ನು ನಾನು ಸಾರಬಲ್ಲೆನು.