ನನ್ನ ಪಾಪದ ಭಾರ
ದಾವೀದನ ಕೀರ್ತನೆ; ಜ್ಞಾಪಕಾರ್ಥವಾಗಿ.
ಅಸ್ವಸ್ಥನಾಗಿ, ಗಾಯಗಳು ಕೀವುಗಟ್ಟಿ, ಶತ್ರುಗಳು ಸಂಚು ಹೂಡುತ್ತಿರುವಾಗ ಸ್ನೇಹಿತರಿಂದ ಕೈಬಿಡಲ್ಪಟ್ಟ ದಾವೀದನು, ತನ್ನ ಸ್ಥಿತಿಗೆ ತನ್ನ ಸ್ವಂತ ಪಾಪವೇ ಕಾರಣವೆಂದು ಗುರುತಿಸುತ್ತಾನೆ ಮತ್ತು ತನ್ನ ಆರೋಪಿಗಳಿಗೆ ಎದುರುತ್ತರ ಕೊಡುವುದಿಲ್ಲ. ಕಿವುಡನಂತೆ ಮೌನವಾಗಿದ್ದು, ತನಗೆ ಉತ್ತರಿಸುವರೆಂದು ಅವನು ನಿರೀಕ್ಷಿಸುವ ಏಕೈಕರಾದ ತನ್ನ ತಂದೆಗಾಗಿ ಕಾಯುತ್ತಾನೆ.
38 1ನನ್ನ ತಂದೆಯೇ, ನಿಮ್ಮ ಕೋಪದಲ್ಲಿ ನನ್ನನ್ನು ಗದರಿಸಬೇಡಿ, ನಿಮ್ಮ ರೋಷದಲ್ಲಿ ನನ್ನನ್ನು ಶಿಕ್ಷಿಸಬೇಡಿ. 2ನಿಮ್ಮ ಬಾಣಗಳು ನನ್ನೊಳಗೆ ಆಳವಾಗಿ ನಾಟಿವೆ, ನಿಮ್ಮ ಹಸ್ತ ನನ್ನ ಮೇಲೆ ಭಾರವಾಗಿ ಒತ್ತಿದೆ. 3ನಿಮ್ಮ ಕೋಪದ ನಿಮಿತ್ತ ನನ್ನ ದೇಹದಲ್ಲಿ ಆರೋಗ್ಯವಿಲ್ಲ; ನನ್ನ ಪಾಪದ ನಿಮಿತ್ತ ನನ್ನ ಎಲುಬುಗಳಲ್ಲಿ ಸ್ವಸ್ಥತೆಯಿಲ್ಲ.
4ನನ್ನ ಪಾಪಗಳು ನನ್ನ ತಲೆಯ ಮೇಲೆ ಏರಿಹೋಗಿವೆ; ಭಾರವಾದ ಹೊರೆಯಂತೆ ಅವು ನನಗೆ ಹೊರಲಾಗದಷ್ಟು ಭಾರವಾಗಿವೆ. 5ನನ್ನ ಮೂರ್ಖತನದ ನಿಮಿತ್ತ ನನ್ನ ಗಾಯಗಳು ಕೀವುಗಟ್ಟಿ ನಾರುತ್ತಿವೆ. 6ನಾನು ಬಾಗಿ ಬಹಳವಾಗಿ ಕುಗ್ಗಿಹೋಗಿದ್ದೇನೆ; ದಿನವೆಲ್ಲಾ ದುಃಖಿಸುತ್ತಾ ತಿರುಗಾಡುತ್ತೇನೆ. 7ನನ್ನ ಪಕ್ಕೆಗಳು ಉರಿಯಿಂದ ತುಂಬಿವೆ, ನನ್ನ ಶರೀರದಲ್ಲಿ ಸ್ವಸ್ಥತೆಯಿಲ್ಲ.
8ನಾನು ಜಡಗೊಂಡು ಸಂಪೂರ್ಣವಾಗಿ ಜಜ್ಜಿಹೋಗಿದ್ದೇನೆ; ನನ್ನ ಹೃದಯದ ತಳಮಳದ ನಿಮಿತ್ತ ನಾನು ನರಳುತ್ತೇನೆ. 9ಓ ಸಾರ್ವಭೌಮ ತಂದೆಯೇ, ನನ್ನ ಹಂಬಲವೆಲ್ಲಾ ನಿಮ್ಮ ಮುಂದಿದೆ, ನನ್ನ ನಿಟ್ಟುಸಿರು ನಿಮಗೆ ಮರೆಯಾಗಿಲ್ಲ. 10ನನ್ನ ಹೃದಯ ಬಡಿದುಕೊಳ್ಳುತ್ತದೆ, ನನ್ನ ಬಲ ಕುಂದಿದೆ; ನನ್ನ ಕಣ್ಣುಗಳ ಬೆಳಕು ಕೂಡ ನನ್ನನ್ನು ಬಿಟ್ಟುಹೋಗಿದೆ. 11ನನ್ನ ಮಿತ್ರರೂ ಸಂಗಡಿಗರೂ ನನ್ನ ಬಾಧೆಯಿಂದ ದೂರ ನಿಲ್ಲುತ್ತಾರೆ, ನನ್ನ ಹತ್ತಿರದ ಬಂಧುಗಳು ದೂರದಲ್ಲಿ ನಿಲ್ಲುತ್ತಾರೆ.
12ನನ್ನ ಪ್ರಾಣವನ್ನು ಹುಡುಕುವವರು ಉರುಲುಗಳನ್ನು ಒಡ್ಡುತ್ತಾರೆ; ನನ್ನ ಕೇಡನ್ನು ಬಯಸುವವರು ನಾಶನದ ಮಾತುಗಳನ್ನಾಡುತ್ತಾ ದಿನವೆಲ್ಲಾ ಮೋಸವನ್ನು ಕಲ್ಪಿಸುತ್ತಾರೆ. 13ಆದರೆ ನಾನು ಕೇಳಲಾರದ ಕಿವುಡನಂತಿದ್ದೇನೆ, ಮಾತನಾಡಲಾರದ, ಬಾಯಿ ತೆರೆಯದ ಮೂಕನಂತಿದ್ದೇನೆ. 14ನಾನು ಕೇಳಿಸಿಕೊಳ್ಳದ ಮನುಷ್ಯನಂತಾಗಿದ್ದೇನೆ, ಅವನ ಬಾಯಲ್ಲಿ ಯಾವ ಉತ್ತರವೂ ಇಲ್ಲ. 15ಆದರೆ ನನ್ನ ತಂದೆಯೇ, ನಿಮಗಾಗಿ ನಾನು ಕಾದಿದ್ದೇನೆ; ಓ ನನ್ನ ಸಾರ್ವಭೌಮ ತಂದೆಯೇ, ನೀವೇ ಉತ್ತರಕೊಡುವಿರಿ.
16ನಾನು, “ನನ್ನ ಕಾಲು ಜಾರಿದಾಗ ನನ್ನ ಮೇಲೆ ಕೊಚ್ಚಿಕೊಳ್ಳುವವರು ನನ್ನ ವಿಷಯವಾಗಿ ಎಂದಿಗೂ ಹಿಗ್ಗದಿರಲಿ,” ಎಂದೆನು. 17ನಾನು ಬೀಳುವ ಸ್ಥಿತಿಯಲ್ಲಿದ್ದೇನೆ, ನನ್ನ ನೋವು ಯಾವಾಗಲೂ ನನ್ನ ಮುಂದಿದೆ. 18ನನ್ನ ಅಪರಾಧವನ್ನು ಅರಿಕೆಮಾಡುತ್ತೇನೆ; ನನ್ನ ಪಾಪದ ನಿಮಿತ್ತ ನಾನು ಕಳವಳಗೊಂಡಿದ್ದೇನೆ. 19ಆದರೆ ನನ್ನ ವೈರಿಗಳು ಚುರುಕಾಗಿಯೂ ಬಲಿಷ್ಠರಾಗಿಯೂ ಇದ್ದಾರೆ, ನಿಷ್ಕಾರಣವಾಗಿ ನನ್ನನ್ನು ದ್ವೇಷಿಸುವವರು ಅನೇಕರಿದ್ದಾರೆ.
20ನಾನು ಒಳಿತನ್ನು ಅನುಸರಿಸುವುದರಿಂದ, ಒಳಿತಿಗೆ ಪ್ರತಿಯಾಗಿ ಕೇಡನ್ನು ಸಲ್ಲಿಸುವವರು ನನ್ನ ಮೇಲೆ ತಪ್ಪುಹೊರಿಸುತ್ತಾರೆ. 21ನನ್ನ ತಂದೆಯೇ, ನನ್ನನ್ನು ಕೈಬಿಡಬೇಡಿ; ನನ್ನ ತಂದೆಯೇ, ನನ್ನಿಂದ ದೂರ ನಿಲ್ಲಬೇಡಿ. 22ಓ ಸಾರ್ವಭೌಮ ತಂದೆಯೇ, ನನ್ನ ರಕ್ಷಣೆಯೇ, ನನಗೆ ಸಹಾಯಮಾಡಲು ತ್ವರೆಪಡಿರಿ.