ಸಿಂಹದಂತೆ ಧೈರ್ಯಶಾಲಿ
ಅಧಿಕಾರ ಮತ್ತು ಹಣ ಜೊತೆಜೊತೆಯಾಗಿ. ದಂಗೆಯೇಳುವ ದೇಶಕ್ಕೆ ಅನೇಕ ಅಧಿಪತಿಗಳು; ದುಷ್ಟ ಅಧಿಪತಿ ನುಗ್ಗುವ ಕರಡಿಯಂತೆ; ದುಷ್ಟರು ಏರಿದಾಗ ಜನರು ಅಡಗಿಕೊಳ್ಳುತ್ತಾರೆ. ಪಾಪಗಳನ್ನು ಮುಚ್ಚಿಡುವವನು ಸಫಲನಾಗುವುದಿಲ್ಲ, ಅರಿಕೆಮಾಡುವವನು ಕರುಣೆ ಹೊಂದುತ್ತಾನೆ; ಶ್ರೀಮಂತನಾಗಲು ಆತುರಪಡುವುದೇ ಮನುಷ್ಯನನ್ನು ಹಾಳುಮಾಡುತ್ತದೆ ಎಂದು ಪದೇಪದೇ ಹೇಳಲಾಗಿದೆ.
28 1ಯಾರೂ ಬೆನ್ನಟ್ಟದಿದ್ದರೂ ದುಷ್ಟರು ಓಡಿಹೋಗುತ್ತಾರೆ; ಆದರೆ ನೀತಿವಂತರು ಸಿಂಹದಂತೆ ಧೈರ್ಯಶಾಲಿಗಳಾಗಿದ್ದಾರೆ. 2ದೇಶವು ದಂಗೆಯೆದ್ದಾಗ ಅದಕ್ಕೆ ಅನೇಕ ಅಧಿಪತಿಗಳು ಬರುತ್ತಾರೆ; ಆದರೆ ವಿವೇಕವೂ ಜ್ಞಾನವೂ ಉಳ್ಳ ಮನುಷ್ಯನಿಂದ ಅದು ಸ್ಥಿರವಾಗಿ ಉಳಿಯುತ್ತದೆ. 3ದಿಕ್ಕಿಲ್ಲದವರನ್ನು ಹಿಂಸಿಸುವ ಬಡ ಮನುಷ್ಯನು ಆಹಾರವನ್ನು ಉಳಿಸದ ಜೋರುಮಳೆಯಂತಿದ್ದಾನೆ. 4ಧರ್ಮಶಾಸ್ತ್ರವನ್ನು ತೊರೆಯುವವರು ದುಷ್ಟರನ್ನು ಹೊಗಳುತ್ತಾರೆ; ಆದರೆ ಧರ್ಮಶಾಸ್ತ್ರವನ್ನು ಕೈಕೊಳ್ಳುವವರು ಅವರ ವಿರುದ್ಧ ಹೋರಾಡುತ್ತಾರೆ. 5ಕೆಟ್ಟ ಜನರು ನ್ಯಾಯವನ್ನು ಅರ್ಥಮಾಡಿಕೊಳ್ಳುವುದಿಲ್ಲ; ಆದರೆ ನಮ್ಮ ತಂದೆಯನ್ನು ಹುಡುಕುವವರು ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. 6ತನ್ನ ಮಾರ್ಗಗಳಲ್ಲಿ ವಕ್ರನಾದ ಐಶ್ವರ್ಯವಂತನಿಗಿಂತ ಯಥಾರ್ಥತೆಯಿಂದ ನಡೆಯುವ ಬಡವನು ಶ್ರೇಷ್ಠನು. 7ಧರ್ಮಶಾಸ್ತ್ರವನ್ನು ಕೈಕೊಳ್ಳುವವನು ವಿವೇಕಿಯಾದ ಮಗನು; ಆದರೆ ಹೊಟ್ಟೆಬಾಕರ ಜೊತೆಗಾರನು ತನ್ನ ತಂದೆಗೆ ಅವಮಾನ ತರುತ್ತಾನೆ. 8ಬಡ್ಡಿಯಿಂದಲೂ ಅನ್ಯಾಯದ ಲಾಭದಿಂದಲೂ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳುವವನು, ಬಡವರಿಗೆ ಔದಾರ್ಯ ತೋರುವವನಿಗಾಗಿ ಅದನ್ನು ಕೂಡಿಸಿಡುತ್ತಾನೆ. 9ಯಾರಾದರೂ ಧರ್ಮಶಾಸ್ತ್ರವನ್ನು ಕೇಳಲು ನಿರಾಕರಿಸಿದರೆ, ಅವನ ಪ್ರಾರ್ಥನೆಯೂ ಅಸಹ್ಯವಾಗಿದೆ. 10ಯಥಾರ್ಥವಂತರನ್ನು ಕೆಟ್ಟ ಮಾರ್ಗದಲ್ಲಿ ದಾರಿತಪ್ಪಿಸುವವನು ತನ್ನ ಸ್ವಂತ ಗುಂಡಿಯಲ್ಲಿ ಬೀಳುವನು; ಆದರೆ ನಿರ್ದೋಷಿಗಳು ಒಳ್ಳೆಯವುಗಳನ್ನು ಬಾಧ್ಯವಾಗಿ ಪಡೆಯುವರು. 11ಐಶ್ವರ್ಯವಂತನು ತನ್ನ ದೃಷ್ಟಿಯಲ್ಲಿ ಜ್ಞಾನಿಯಾಗಿದ್ದಾನೆ; ಆದರೆ ವಿವೇಕಿಯಾದ ಬಡವನು ಅವನ ಒಳಗುಟ್ಟನ್ನು ಅರಿತುಕೊಳ್ಳುತ್ತಾನೆ. 12ನೀತಿವಂತರು ಜಯಗಳಿಸಿದಾಗ ಮಹಾ ಘನತೆ ಉಂಟಾಗುತ್ತದೆ; ಆದರೆ ದುಷ್ಟರು ಮೇಲೇರಿದಾಗ ಜನರು ಅಡಗಿಕೊಳ್ಳುತ್ತಾರೆ. 13ತನ್ನ ಪಾಪಗಳನ್ನು ಮುಚ್ಚಿಡುವವನು ಅಭಿವೃದ್ಧಿ ಹೊಂದುವುದಿಲ್ಲ; ಆದರೆ ಅವುಗಳನ್ನು ಅರಿಕೆಮಾಡಿ ತೊರೆಯುವವನು ಕರುಣೆಯನ್ನು ಹೊಂದುವನು. 14ಯಾವಾಗಲೂ ಭಯಭಕ್ತಿಯಿಂದಿರುವವನು ಧನ್ಯನು; ಆದರೆ ತನ್ನ ಹೃದಯವನ್ನು ಕಠಿಣಗೊಳಿಸಿಕೊಳ್ಳುವವನು ವಿಪತ್ತಿನಲ್ಲಿ ಬೀಳುವನು. 15ಗರ್ಜಿಸುವ ಸಿಂಹದಂತೆಯೂ ಮೇಲೆ ನುಗ್ಗುವ ಕರಡಿಯಂತೆಯೂ ದಿಕ್ಕಿಲ್ಲದ ಜನರ ಮೇಲೆ ಆಳುವ ದುಷ್ಟ ಅಧಿಪತಿ ಇದ್ದಾನೆ. 16ವಿವೇಕವಿಲ್ಲದ ಅಧಿಪತಿ ಕ್ರೂರ ಹಿಂಸಕನಾಗಿದ್ದಾನೆ; ಆದರೆ ಅನ್ಯಾಯದ ಲಾಭವನ್ನು ದ್ವೇಷಿಸುವವನು ತನ್ನ ದಿನಗಳನ್ನು ಹೆಚ್ಚಿಸಿಕೊಳ್ಳುವನು. 17ರಕ್ತಪಾತದ ಅಪರಾಧದ ಭಾರ ಹೊತ್ತ ಮನುಷ್ಯನು ಸಾಯುವ ತನಕ ಓಡಿಹೋಗುವವನಾಗಿರುವನು; ಯಾರೂ ಅವನಿಗೆ ಆಸರೆಕೊಡದಿರಲಿ. 18ಯಥಾರ್ಥತೆಯಿಂದ ನಡೆಯುವವನು ಸುರಕ್ಷಿತವಾಗಿ ಕಾಪಾಡಲ್ಪಡುವನು; ಆದರೆ ತನ್ನ ಮಾರ್ಗಗಳಲ್ಲಿ ವಕ್ರನಾದವನು ಹಠಾತ್ತನೆ ಬೀಳುವನು. 19ತನ್ನ ಭೂಮಿಯನ್ನು ವ್ಯವಸಾಯಮಾಡುವವನಿಗೆ ಹೇರಳ ಆಹಾರ ದೊರೆಯುವುದು; ಆದರೆ ವ್ಯರ್ಥ ಕಾರ್ಯಗಳನ್ನು ಬೆನ್ನಟ್ಟುವವನಿಗೆ ಹೇರಳ ಬಡತನ ದೊರೆಯುವುದು. 20ನಂಬಿಗಸ್ತನಾದ ಮನುಷ್ಯನು ಆಶೀರ್ವಾದಗಳಿಂದ ತುಂಬಿರುವನು; ಆದರೆ ಐಶ್ವರ್ಯವಂತನಾಗಲು ಆತುರಪಡುವವನು ದಂಡನೆಗೆ ತಪ್ಪಿಸಿಕೊಳ್ಳುವುದಿಲ್ಲ. 21ಪಕ್ಷಪಾತ ತೋರುವುದು ಒಳ್ಳೆಯದಲ್ಲ; ಆದರೂ ಒಂದು ತುಂಡು ರೊಟ್ಟಿಗಾಗಿ ಮನುಷ್ಯನು ಅನ್ಯಾಯ ಮಾಡುತ್ತಾನೆ. 22ಜಿಪುಣನು ಐಶ್ವರ್ಯದ ಹಿಂದೆ ಆತುರದಿಂದ ಓಡುತ್ತಾನೆ; ಬಡತನವು ತನ್ನನ್ನು ಮುತ್ತಿಕೊಳ್ಳುವುದೆಂದು ತಿಳಿಯುವುದಿಲ್ಲ. 23ನಾಲಿಗೆಯಿಂದ ಹೊಗಳುವವನಿಗಿಂತ ಮನುಷ್ಯನನ್ನು ಗದರಿಸುವವನು ಕೊನೆಯಲ್ಲಿ ಹೆಚ್ಚು ದಯೆ ಹೊಂದುವನು. 24ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಸುಲಿಗೆಮಾಡಿ, “ಇದು ಪಾಪವಲ್ಲ,” ಎನ್ನುವವನು ನಾಶಮಾಡುವವನ ಜೊತೆಗಾರನಾಗಿದ್ದಾನೆ. 25ದುರಾಶೆಯುಳ್ಳ ಮನುಷ್ಯನು ಕಲಹವನ್ನು ಎಬ್ಬಿಸುತ್ತಾನೆ; ಆದರೆ ನಮ್ಮ ತಂದೆಯಲ್ಲಿ ಭರವಸೆಯಿಡುವವನು ಸಮೃದ್ಧಿ ಹೊಂದುವನು. 26ತನ್ನ ಸ್ವಂತ ಹೃದಯದಲ್ಲಿ ಭರವಸೆಯಿಡುವವನು ಮೂರ್ಖನು; ಆದರೆ ಜ್ಞಾನದಲ್ಲಿ ನಡೆಯುವವನು ಸುರಕ್ಷಿತವಾಗಿ ಕಾಪಾಡಲ್ಪಡುವನು. 27ಬಡವರಿಗೆ ಕೊಡುವವನಿಗೆ ಯಾವ ಕೊರತೆಯೂ ಇರುವುದಿಲ್ಲ; ಆದರೆ ಅವರ ಕಡೆಗೆ ಕಣ್ಣುಮುಚ್ಚಿಕೊಳ್ಳುವವನು ಅನೇಕ ಶಾಪಗಳನ್ನು ಹೊಂದುವನು. 28ದುಷ್ಟರು ಮೇಲೇರಿದಾಗ ಜನರು ಅಡಗಿಕೊಳ್ಳುತ್ತಾರೆ; ಆದರೆ ಅವರು ನಾಶವಾದಾಗ ನೀತಿವಂತರು ವೃದ್ಧಿಯಾಗುತ್ತಾರೆ.