ಚದರಿಹೋದವರಿಗೆ ಪೇತ್ರನು ಬರೆಯುತ್ತಾನೆ
ತಮ್ಮ ನಂಬಿಕೆಗಾಗಿ ಕಷ್ಟಪಡುತ್ತಿರುವ ಕ್ರೈಸ್ತರಿಗೆ ಪ್ರೋತ್ಸಾಹ; ಅವರ ಜೀವವುಳ್ಳ ನಿರೀಕ್ಷೆಯನ್ನೂ ನಮ್ಮ ತಂದೆಯ ಆಯ್ಕೆಯಾದ ಜನರೆಂಬ ಅವರ ಗುರುತನ್ನೂ ಅವರಿಗೆ ನೆನಪಿಸುತ್ತದೆ.
1 1ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು, ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ, ಬಿಥೂನ್ಯ ಪ್ರಾಂತ್ಯಗಳಲ್ಲಿ ಚದರಿಹೋಗಿ ವಾಸಿಸುವ, ಆಯ್ಕೆಯಾದ ಪರದೇಶಿಗಳಿಗೆ ಬರೆಯುವುದೇನೆಂದರೆ: 2ನಮ್ಮ ತಂದೆಯ ಪೂರ್ವಜ್ಞಾನದ ಪ್ರಕಾರ ಆಯ್ಕೆಯಾಗಿ, ಯೇಸು ಕ್ರಿಸ್ತನಿಗೆ ವಿಧೇಯರಾಗುವಂತೆಯೂ ಅವರ ರಕ್ತದಿಂದ ಪ್ರೋಕ್ಷಿಸಲ್ಪಡುವಂತೆಯೂ ಪವಿತ್ರಾತ್ಮರಿಂದ ಪವಿತ್ರರಾದ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
ಜೀವವುಳ್ಳ ನಿರೀಕ್ಷೆಗೆ ಹುಟ್ಟಿದವರು
3ನಮ್ಮ ತಂದೆಗೆ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಗೆ, ಸ್ತೋತ್ರವಾಗಲಿ. ಅವರು ತಮ್ಮ ಮಹಾ ಕರುಣೆಯಿಂದ, ಸತ್ತವರೊಳಗಿಂದ ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ, ಜೀವವುಳ್ಳ ನಿರೀಕ್ಷೆಗೆ ನಮ್ಮನ್ನು ಹೊಸದಾಗಿ ಹುಟ್ಟಿಸಿದರು. 4ಎಂದಿಗೂ ನಾಶವಾಗದ, ಕೆಡದ, ಬಾಡಿಹೋಗದ ಸ್ವಾಸ್ತ್ಯಕ್ಕೆ ಹುಟ್ಟಿಸಿದರು; ಆ ಸ್ವಾಸ್ತ್ಯವು ನಿಮಗೋಸ್ಕರ ಪರಲೋಕದಲ್ಲಿ ಕಾದಿರಿಸಲ್ಪಟ್ಟಿದೆ. 5ಅಂತ್ಯಕಾಲದಲ್ಲಿ ಪ್ರಕಟವಾಗಲು ಸಿದ್ಧವಾಗಿರುವ ರಕ್ಷಣೆಗಾಗಿ ನೀವು ನಂಬಿಕೆಯ ಮೂಲಕ ನಮ್ಮ ತಂದೆಯ ಶಕ್ತಿಯಿಂದ ಕಾಪಾಡಲ್ಪಡುತ್ತೀರಿ. 6ಇದರಲ್ಲಿ ನೀವು ಬಹಳವಾಗಿ ಆನಂದಿಸುತ್ತೀರಿ; ಆದರೆ ಈಗ ಸ್ವಲ್ಪಕಾಲ ನಾನಾ ವಿಧವಾದ ಕಷ್ಟಗಳಿಂದ ನೀವು ದುಃಖಪಡಬೇಕಾಗಿ ಬಂದಿರಬಹುದು. 7ಬೆಂಕಿಯಿಂದ ಶುದ್ಧೀಕರಿಸಲ್ಪಟ್ಟರೂ ನಾಶವಾಗುವ ಚಿನ್ನಕ್ಕಿಂತ ನಿಮ್ಮ ನಂಬಿಕೆಯು ಹೆಚ್ಚು ಬೆಲೆಯುಳ್ಳದ್ದು; ಅದು ಪರೀಕ್ಷೆಗೊಳಗಾಗಿ ನಿಜವೆಂದು ಕಂಡುಬಂದು, ಯೇಸು ಕ್ರಿಸ್ತನು ಪ್ರತ್ಯಕ್ಷರಾಗುವಾಗ ಹೊಗಳಿಕೆಯನ್ನೂ ಮಹಿಮೆಯನ್ನೂ ಗೌರವವನ್ನೂ ಉಂಟುಮಾಡುವಂತೆ ಇವೆಲ್ಲಾ ಸಂಭವಿಸಿದವು. 8ನೀವು ಅವರನ್ನು ನೋಡಿಯೇ ಇಲ್ಲದಿದ್ದರೂ ಪ್ರೀತಿಸುತ್ತೀರಿ; ಈಗ ಅವರನ್ನು ಕಾಣದಿದ್ದರೂ ನಂಬುತ್ತೀರಿ. ಹೀಗೆ ವರ್ಣಿಸಲಾಗದ, ಮಹಿಮೆಯಿಂದ ತುಂಬಿರುವ ಆನಂದದಿಂದ ಉಲ್ಲಾಸಪಡುತ್ತೀರಿ. 9ನಿಮ್ಮ ನಂಬಿಕೆಯ ಗುರಿಯಾದ, ನಿಮ್ಮ ಆತ್ಮಗಳ ರಕ್ಷಣೆಯನ್ನು ನೀವು ಹೊಂದುತ್ತಿದ್ದೀರಿ.
10ನಿಮಗೋಸ್ಕರ ಸಿದ್ಧವಾದ ಕೃಪೆಯ ಕುರಿತು ಮಾತನಾಡಿದ ಪ್ರವಾದಿಗಳು ಈ ರಕ್ಷಣೆಯ ವಿಷಯವಾಗಿ ಜಾಗ್ರತೆಯಿಂದ ವಿಚಾರಿಸಿ ಪರಿಶೋಧಿಸಿದರು. 11ಅವರಲ್ಲಿದ್ದ ಕ್ರಿಸ್ತನ ಆತ್ಮವು ಕ್ರಿಸ್ತನ ಬಾಧೆಗಳನ್ನೂ ಅವುಗಳ ತರುವಾಯ ಬರುವ ಮಹಿಮೆಗಳನ್ನೂ ಮುಂತಿಳಿಸಿದಾಗ, ಆ ಆತ್ಮವು ಸೂಚಿಸಿದ ಕಾಲವೂ ಸನ್ನಿವೇಶವೂ ಯಾವುದೆಂದು ಅವರು ಹುಡುಕಿದರು. 12ಅವರು ತಮಗೋಸ್ಕರವಲ್ಲ, ನಿಮಗೋಸ್ಕರವೇ ಈ ಕಾರ್ಯಗಳನ್ನು ನಡೆಸಿದರೆಂದು ಅವರಿಗೆ ಪ್ರಕಟವಾಯಿತು. ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮರ ಮೂಲಕ ನಿಮಗೆ ಶುಭವರ್ತಮಾನವನ್ನು ಸಾರಿದವರ ಮುಖಾಂತರ ಈಗ ನಿಮಗೆ ತಿಳಿಸಲ್ಪಟ್ಟ ಈ ಸಂಗತಿಗಳನ್ನು ಅವರು ಹೇಳಿದರು. ಈ ಸಂಗತಿಗಳನ್ನು ಕಣ್ಣಿಟ್ಟು ನೋಡಬೇಕೆಂದು ದೇವದೂತರು ಸಹ ಹಂಬಲಿಸುತ್ತಾರೆ.
ಪವಿತ್ರರಾಗಿರಲು ಕರೆಯಲ್ಪಟ್ಟವರು
13ಆದ್ದರಿಂದ, ನಿಮ್ಮ ಮನಸ್ಸನ್ನು ಕಾರ್ಯಕ್ಕೆ ಸಿದ್ಧಪಡಿಸಿಕೊಂಡು, ಸಂಪೂರ್ಣ ಸ್ವಸ್ಥಚಿತ್ತರಾಗಿ, ಯೇಸು ಕ್ರಿಸ್ತನು ಪ್ರತ್ಯಕ್ಷರಾಗುವಾಗ ನಿಮಗೆ ತರಲ್ಪಡುವ ಕೃಪೆಯ ಮೇಲೆ ಸಂಪೂರ್ಣವಾಗಿ ನಿರೀಕ್ಷೆಯಿಡಿರಿ. 14ವಿಧೇಯರಾದ ಮಕ್ಕಳಾಗಿ, ನಿಮ್ಮ ಅಜ್ಞಾನಕಾಲದಲ್ಲಿ ನೀವು ಅನುಸರಿಸಿದ ದುರಾಶೆಗಳಿಗೆ ಅನುಗುಣವಾಗಿ ರೂಪುಗೊಳ್ಳಬೇಡಿರಿ. 15ಆದರೆ ನಿಮ್ಮನ್ನು ಕರೆದವರು ಪವಿತ್ರರಾಗಿರುವಂತೆಯೇ, ನೀವೂ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪವಿತ್ರರಾಗಿರಿ.
16ಏಕೆಂದರೆ ಹೀಗೆ ಬರೆದಿದೆ: “ಪವಿತ್ರರಾಗಿರಿ, ಏಕೆಂದರೆ ನಾನು ಪವಿತ್ರನಾಗಿದ್ದೇನೆ.”
17ಪ್ರತಿಯೊಬ್ಬನ ಕ್ರಿಯೆಗೆ ತಕ್ಕಂತೆ ಪಕ್ಷಪಾತವಿಲ್ಲದೆ ತೀರ್ಪುಮಾಡುವ ತಂದೆಯನ್ನು ನೀವು ಪ್ರಾರ್ಥಿಸುವುದರಿಂದ, ಈ ಲೋಕದಲ್ಲಿ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ. 18ನಿಮ್ಮ ಪಿತೃಗಳಿಂದ ಬಳುವಳಿಯಾಗಿ ಬಂದ ವ್ಯರ್ಥ ಜೀವನದಿಂದ ನೀವು ಬಿಡುಗಡೆ ಹೊಂದಿದ್ದು ನಾಶವಾಗುವ ಬೆಳ್ಳಿಬಂಗಾರಗಳಿಂದಲ್ಲ ಎಂದು ನೀವು ಬಲ್ಲಿರಿ. 19ಬದಲಾಗಿ, ದೋಷವಾಗಲಿ ಕಳಂಕವಾಗಲಿ ಇಲ್ಲದ ಕುರಿಮರಿಯಂತಿರುವ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಬಿಡುಗಡೆ ಹೊಂದಿದ್ದೀರಿ. 20ಅವರು ಲೋಕದ ಅಸ್ತಿವಾರಕ್ಕೆ ಮುಂಚೆಯೇ ಆಯ್ಕೆಯಾಗಿದ್ದರು; ಆದರೆ ಈ ಅಂತ್ಯಕಾಲಗಳಲ್ಲಿ ನಿಮಗೋಸ್ಕರ ಪ್ರತ್ಯಕ್ಷರಾದರು. 21ಅವರ ಮೂಲಕ ನೀವು ನಮ್ಮ ತಂದೆಯನ್ನು ನಂಬುತ್ತೀರಿ; ಆ ತಂದೆಯೇ ಅವರನ್ನು ಸತ್ತವರೊಳಗಿಂದ ಎಬ್ಬಿಸಿ ಮಹಿಮೆಪಡಿಸಿದರು. ಆದ್ದರಿಂದ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ನಮ್ಮ ತಂದೆಯಲ್ಲಿವೆ.
22ಸತ್ಯಕ್ಕೆ ವಿಧೇಯರಾಗಿ ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡು, ಸಹೋದರರ ಮೇಲೆ ನಿಷ್ಕಪಟವಾದ ಪ್ರೀತಿಯನ್ನಿಡುವಂತಾಗಿರುವುದರಿಂದ, ಶುದ್ಧ ಹೃದಯದಿಂದ ಒಬ್ಬರನ್ನೊಬ್ಬರು ಆಳವಾಗಿ ಪ್ರೀತಿಸಿರಿ. 23ನೀವು ಹೊಸದಾಗಿ ಹುಟ್ಟಿದ್ದೀರಿ — ನಾಶವಾಗುವ ಬೀಜದಿಂದಲ್ಲ, ನಾಶವಾಗದ ಬೀಜದಿಂದಲೇ; ಅದು ಜೀವವುಳ್ಳ, ಶಾಶ್ವತವಾಗಿ ನೆಲೆನಿಲ್ಲುವ ನಮ್ಮ ತಂದೆಯ ವಾಕ್ಯದ ಮೂಲಕ. 24ಏಕೆಂದರೆ, “ಎಲ್ಲಾ ಜನರು ಹುಲ್ಲಿನಂತಿದ್ದಾರೆ, ಅವರ ಎಲ್ಲಾ ವೈಭವವು ಹೊಲದ ಹೂವುಗಳಂತಿದೆ; ಹುಲ್ಲು ಒಣಗುತ್ತದೆ, ಹೂವುಗಳು ಉದುರಿಹೋಗುತ್ತವೆ, 25ಆದರೆ ನಮ್ಮ ತಂದೆಯ ವಾಕ್ಯವು ಸದಾಕಾಲ ನೆಲೆಯಾಗಿ ಉಳಿಯುತ್ತದೆ.” ನಿಮಗೆ ಸಾರಲ್ಪಟ್ಟ ವಾಕ್ಯವು ಇದೇ.