ಅವರ ನಾಮವನ್ನು ಸ್ತುತಿಸಿರಿ
ಸಾಕ್ಷ್ಯಾಧಾರಗಳ ಮೇಲೆ ಕಟ್ಟಲಾದ ಸ್ತುತಿ: ನಮ್ಮ ತಂದೆ ಸಮುದ್ರದಲ್ಲೂ ಆಕಾಶದಲ್ಲೂ ತಮಗೆ ಇಷ್ಟವಾದದ್ದನ್ನೆಲ್ಲಾ ಮಾಡುತ್ತಾರೆ, ಅವರು ಐಗುಪ್ತವನ್ನು ಹೊಡೆದರು, ಸೀಹೋನನನ್ನೂ ಓಗನನ್ನೂ ಕೆಡವಿ ಅವರ ದೇಶವನ್ನು ಒಪ್ಪಿಸಿಕೊಟ್ಟರು. ಅದರ ಪಕ್ಕದಲ್ಲಿಟ್ಟರೆ, ನಿಷ್ಪ್ರಯೋಜಕ ಬಾಯಿಗಳೂ ಕಣ್ಣುಗಳೂ ಇರುವ ವಿಗ್ರಹಗಳು ತಮ್ಮನ್ನು ಮಾಡಿದವರನ್ನು ಅಷ್ಟೇ ಶೂನ್ಯರನ್ನಾಗಿ ಬಿಡುತ್ತವೆ.
135 1ಹಲ್ಲೆಲೂಯಾ! ನಮ್ಮ ತಂದೆಯ ನಾಮವನ್ನು ಸ್ತುತಿಸಿರಿ; ನಮ್ಮ ತಂದೆಯ ಸೇವಕರೇ, ಅವರನ್ನು ಸ್ತುತಿಸಿರಿ, 2ನಮ್ಮ ತಂದೆಯ ಆಲಯದಲ್ಲಿ, ನಮ್ಮ ತಂದೆಯ ಆಲಯದ ಅಂಗಳಗಳಲ್ಲಿ ಸೇವೆಮಾಡುವವರೇ.
3ನಮ್ಮ ತಂದೆ ಒಳ್ಳೆಯವರಾಗಿರುವುದರಿಂದ ನಮ್ಮ ತಂದೆಯನ್ನು ಸ್ತುತಿಸಿರಿ; ಅದು ಮನೋಹರವಾಗಿರುವುದರಿಂದ ಅವರ ನಾಮಕ್ಕೆ ಸ್ತುತಿಗೀತೆ ಹಾಡಿರಿ. 4ಏಕೆಂದರೆ ನಮ್ಮ ತಂದೆ ಯಾಕೋಬನನ್ನು ತಮಗಾಗಿ, ಇಸ್ರಾಯೇಲನ್ನು ತಮ್ಮ ಅಮೂಲ್ಯ ಸೊತ್ತನ್ನಾಗಿ ಆರಿಸಿಕೊಂಡಿದ್ದಾರೆ.
5ನಮ್ಮ ತಂದೆ ಮಹೋನ್ನತರೆಂದೂ ನಮ್ಮ ಒಡೆಯರಾದ ತಂದೆ ಎಲ್ಲಾ ದೇವತೆಗಳಿಗಿಂತ ಮೇಲಾದವರೆಂದೂ ನಾನು ಬಲ್ಲೆನು. 6ನಮ್ಮ ತಂದೆಗೆ ಇಷ್ಟವಾದದ್ದೆಲ್ಲವನ್ನೂ ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಸಮುದ್ರಗಳಲ್ಲಿಯೂ ಅವುಗಳ ಎಲ್ಲಾ ಆಳಗಳಲ್ಲಿಯೂ ಅವರು ಮಾಡಿದ್ದಾರೆ. 7ಅವರು ಭೂಮಿಯ ಕೊನೆಗಳಿಂದ ಮೇಘಗಳನ್ನು ಏರಿಸುತ್ತಾರೆ; ಮಳೆಗಾಗಿ ಮಿಂಚನ್ನು ಉಂಟುಮಾಡಿ ತಮ್ಮ ಉಗ್ರಾಣಗಳಿಂದ ಗಾಳಿಯನ್ನು ಹೊರತರುತ್ತಾರೆ.
8ಅವರು ಐಗುಪ್ತದ ಚೊಚ್ಚಲ ಮಕ್ಕಳನ್ನು, ಮನುಷ್ಯರನ್ನೂ ಪಶುಗಳನ್ನೂ ಸಂಹರಿಸಿದರು. 9ಐಗುಪ್ತವೇ, ಅವರು ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ವಿರೋಧವಾಗಿ ನಿನ್ನ ಮಧ್ಯದಲ್ಲಿ ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಕಳುಹಿಸಿದರು. 10ಅವರು ಅನೇಕ ಜನಾಂಗಗಳನ್ನು ಸಂಹರಿಸಿ ಬಲಿಷ್ಠ ರಾಜರನ್ನು ಕೊಂದರು. 11ಅಮೋರಿಯರ ಅರಸನಾದ ಸೀಹೋನನನ್ನೂ, ಬಾಷಾನಿನ ಅರಸನಾದ ಓಗನನ್ನೂ, ಕಾನಾನಿನ ಎಲ್ಲಾ ರಾಜ್ಯಗಳನ್ನೂ, 12ಅವರ ದೇಶವನ್ನು ಸ್ವಾಸ್ತ್ಯವಾಗಿ, ತಮ್ಮ ಜನರಾದ ಇಸ್ರಾಯೇಲ್ಯರಿಗೆ ಸ್ವಾಸ್ತ್ಯವಾಗಿ ಕೊಟ್ಟರು.
13ತಂದೆಯೇ, ನಿಮ್ಮ ನಾಮವು ಸದಾಕಾಲ ಇರುವುದು; ತಂದೆಯೇ, ನಿಮ್ಮ ಕೀರ್ತಿಯು ತಲತಲಾಂತರಕ್ಕೂ ಇರುವುದು. 14ಏಕೆಂದರೆ ನಮ್ಮ ತಂದೆ ತಮ್ಮ ಜನರಿಗೆ ನ್ಯಾಯತೀರಿಸಿ ತಮ್ಮ ಸೇವಕರ ಮೇಲೆ ಕನಿಕರಪಡುವರು.
15ಜನಾಂಗಗಳ ವಿಗ್ರಹಗಳು ಬೆಳ್ಳಿಬಂಗಾರಗಳೇ, ಮನುಷ್ಯರ ಕೈಕೆಲಸವೇ. 16ಅವುಗಳಿಗೆ ಬಾಯಿ ಇದೆ, ಆದರೆ ಮಾತನಾಡಲಾರವು; ಅವುಗಳಿಗೆ ಕಣ್ಣುಗಳಿವೆ, ಆದರೆ ನೋಡಲಾರವು; 17ಅವುಗಳಿಗೆ ಕಿವಿಗಳಿವೆ, ಆದರೆ ಕೇಳಲಾರವು, ಅವುಗಳ ಬಾಯಲ್ಲಿ ಉಸಿರೇ ಇಲ್ಲ. 18ಅವುಗಳನ್ನು ಮಾಡುವವರು ಅವುಗಳ ಹಾಗೆಯೇ ಆಗುವರು, ಅವುಗಳಲ್ಲಿ ಭರವಸವಿಡುವವರೆಲ್ಲರೂ ಹಾಗೆಯೇ.
19ಇಸ್ರಾಯೇಲ್ ವಂಶದವರೇ, ನಮ್ಮ ತಂದೆಯನ್ನು ಕೊಂಡಾಡಿರಿ; ಆರೋನ್ ವಂಶದವರೇ, ನಮ್ಮ ತಂದೆಯನ್ನು ಕೊಂಡಾಡಿರಿ; 20ಲೇವಿ ವಂಶದವರೇ, ನಮ್ಮ ತಂದೆಯನ್ನು ಕೊಂಡಾಡಿರಿ; ನಮ್ಮ ತಂದೆಗೆ ಭಯಪಡುವವರೇ, ನಮ್ಮ ತಂದೆಯನ್ನು ಕೊಂಡಾಡಿರಿ. 21ಯೆರೂಸಲೇಮಿನಲ್ಲಿ ವಾಸಿಸುವ ನಮ್ಮ ತಂದೆ ಚೀಯೋನಿನಿಂದ ಸ್ತುತಿ ಹೊಂದಲಿ. ಹಲ್ಲೆಲೂಯಾ!