ಸರ್ವಭೂಮಿಗೆ ಒಂದು ಹೊಸ ಗೀತೆ
ಹೊಸ ಹಾಡು ಮಿಷನರಿ ಹಾಡು — ಜನಾಂಗಗಳ ಮಧ್ಯದಲ್ಲಿ ನಮ್ಮ ತಂದೆಯ ಕಾರ್ಯಗಳನ್ನು ಪ್ರಕಟಿಸಿರಿ, ಕಾಣಿಕೆಯನ್ನು ತನ್ನಿರಿ, ಆತನು ಆಳುತ್ತಾನೆ ಎಂದು ಅವರಿಗೆ ಹೇಳಿರಿ. ಇತರ ದೇವರುಗಳು ಕೈಯಿಂದ ಮಾಡಿದ ಶೂನ್ಯಗಳು. ಸಮುದ್ರವೂ ಹೊಲಗಳೂ ಕಾಡಿನ ಮರಗಳೂ ಬರಲಿರುವ ನ್ಯಾಯಾಧಿಪತಿಗೆ ಜಯಘೋಷ ಮಾಡಲು ಸೇರಿಸಲ್ಪಡುತ್ತವೆ.
96 1ನಮ್ಮ ತಂದೆಗೆ ಹೊಸ ಗೀತೆಯನ್ನು ಹಾಡಿರಿ; ಸರ್ವಭೂಮಿಯೇ, ನಮ್ಮ ತಂದೆಗೆ ಹಾಡಿರಿ.
2ನಮ್ಮ ತಂದೆಗೆ ಹಾಡಿರಿ, ಅವರ ನಾಮವನ್ನು ಕೊಂಡಾಡಿರಿ; ಅವರ ರಕ್ಷಣೆಯನ್ನು ದಿನದಿನವೂ ಸಾರಿರಿ. 3ಅವರ ಮಹಿಮೆಯ ಕಾರ್ಯಗಳನ್ನು ಜನಾಂಗಗಳಲ್ಲಿ, ಅವರ ಅದ್ಭುತಕಾರ್ಯಗಳನ್ನು ಸರ್ವಜನರಲ್ಲಿ ಪ್ರಕಟಿಸಿರಿ. 4ನಮ್ಮ ತಂದೆ ಮಹೋನ್ನತರು, ಸ್ತುತಿಗೆ ಅತ್ಯಂತ ಯೋಗ್ಯರು; ಎಲ್ಲಾ ದೇವತೆಗಳಿಗಿಂತ ಹೆಚ್ಚಾಗಿ ಅವರಿಗೆ ಭಯಪಡಬೇಕು. 5ಜನಗಳ ದೇವತೆಗಳೆಲ್ಲಾ ವಿಗ್ರಹಗಳೇ, ಆದರೆ ನಮ್ಮ ತಂದೆ ಆಕಾಶಗಳನ್ನು ಸೃಷ್ಟಿಸಿದರು. 6ಪ್ರಭೆಯೂ ಮಹತ್ತ್ವವೂ ಅವರ ಮುಂದೆ ಇವೆ; ಬಲವೂ ಸೌಂದರ್ಯವೂ ಅವರ ಪವಿತ್ರಾಲಯದಲ್ಲಿ ಇವೆ.
7ಜನಗಳ ಸಕಲ ಕುಲಗಳೇ, ನಮ್ಮ ತಂದೆಗೆ ಸಲ್ಲಿಸಿರಿ, ನಮ್ಮ ತಂದೆಗೆ ಮಹಿಮೆಯನ್ನೂ ಬಲವನ್ನೂ ಸಲ್ಲಿಸಿರಿ. 8ನಮ್ಮ ತಂದೆಗೆ ಅವರ ನಾಮಕ್ಕೆ ಯೋಗ್ಯವಾದ ಮಹಿಮೆಯನ್ನು ಸಲ್ಲಿಸಿರಿ; ಕಾಣಿಕೆಯನ್ನು ತಂದು ಅವರ ಪ್ರಾಕಾರಗಳಿಗೆ ಬನ್ನಿರಿ. 9ಪರಿಶುದ್ಧತೆಯ ಪ್ರಭೆಯಲ್ಲಿ ನಮ್ಮ ತಂದೆಯನ್ನು ಆರಾಧಿಸಿರಿ; ಸರ್ವಭೂಮಿಯೇ, ಅವರ ಮುಂದೆ ನಡುಗಿರಿ. 10ಜನಾಂಗಗಳಲ್ಲಿ ಹೀಗೆ ಹೇಳಿರಿ: “ನಮ್ಮ ತಂದೆ ಆಳುತ್ತಾರೆ! ಲೋಕವು ದೃಢವಾಗಿ ಸ್ಥಾಪಿತವಾಗಿದೆ; ಅದು ಎಂದಿಗೂ ಕದಲದು. ಅವರು ಜನಗಳಿಗೆ ನ್ಯಾಯಸಮ್ಮತವಾಗಿ ತೀರ್ಪು ಮಾಡುತ್ತಾರೆ.”
11ಆಕಾಶಗಳು ಸಂತೋಷಿಸಲಿ, ಭೂಮಿಯು ಉಲ್ಲಾಸಿಸಲಿ; ಸಮುದ್ರವೂ ಅದರೊಳಗಿನ ಸಮಸ್ತವೂ ಘೋಷಿಸಲಿ. 12ಹೊಲವೂ ಅದರಲ್ಲಿರುವ ಸಮಸ್ತವೂ ಹರ್ಷಿಸಲಿ; ಆಗ ಕಾಡಿನ ಮರಗಳೆಲ್ಲಾ ಆನಂದದಿಂದ ಹಾಡುವವು. 13ನಮ್ಮ ತಂದೆಯ ಮುಂದೆ, ಏಕೆಂದರೆ ಅವರು ಬರುತ್ತಾರೆ, ಭೂಮಿಗೆ ತೀರ್ಪು ಮಾಡಲು ಅವರು ಬರುತ್ತಾರೆ. ಅವರು ಲೋಕಕ್ಕೆ ನ್ಯಾಯನೀತಿಯಿಂದ ತೀರ್ಪು ಮಾಡುವರು, ಜನಗಳಿಗೆ ತಮ್ಮ ನಂಬಿಗಸ್ತಿಕೆಯಿಂದ ತೀರ್ಪು ಮಾಡುವರು.