ವಾಕ್ಯವು ಮುಕ್ತವಾಗಿ ಹರಡಲು ಪ್ರಾರ್ಥಿಸಿರಿ
ವಾಕ್ಯವು ಮುಂದೆ ಓಡಲೆಂದು ಪ್ರಾರ್ಥಿಸಬೇಕೆಂದು ಪೌಲನು ಕೇಳಿಕೊಂಡು, ಒಂದು ಸಮಸ್ಯೆಯ ಕಡೆಗೆ ತಿರುಗುತ್ತಾನೆ: ಸಭೆಯಲ್ಲಿ ಕೆಲವರು ಕೆಲಸ ಬಿಟ್ಟು, ಇತರರ ಮೇಲೆ ಅವಲಂಬಿಸಿ ಬದುಕುತ್ತಾ ಪರರ ವಿಷಯಗಳಲ್ಲಿ ತಲೆಹಾಕುವವರಾಗಿದ್ದಾರೆ. ಅವನು ತನ್ನ ಹಗಲಿರುಳಿನ ದುಡಿಮೆಯನ್ನು ತೋರಿಸುತ್ತಾನೆ. ಅಂಥವನನ್ನು ಗುರುತಿಸಿರಿ, ಅವನ ಸಹವಾಸ ಮಾಡಬೇಡಿರಿ; ಆದರೆ ಅವನನ್ನು ಶತ್ರುವಿನಂತೆ ಅಲ್ಲ, ಸಹೋದರನಂತೆ ಎಚ್ಚರಿಸಿರಿ.
3 1ಕೊನೆಯದಾಗಿ, ಸಹೋದರ ಸಹೋದರಿಯರೇ, ನಮ್ಮ ಪ್ರಭು ಯೇಸುವಿನ ವಾಕ್ಯವು ನಿಮ್ಮಲ್ಲಿ ಹೇಗೆ ಹರಡಿತೋ ಹಾಗೆಯೇ ಮುಂದೆ ವೇಗವಾಗಿ ಹರಡಿ ಮಹಿಮೆಹೊಂದುವಂತೆ ನಮಗಾಗಿ ಪ್ರಾರ್ಥಿಸಿರಿ, 2ವಕ್ರಬುದ್ಧಿಯ ದುಷ್ಟ ಜನರಿಂದ ನಾವು ಬಿಡುಗಡೆ ಹೊಂದುವಂತೆಯೂ ಪ್ರಾರ್ಥಿಸಿರಿ; ಏಕೆಂದರೆ ಎಲ್ಲರೂ ವಿಶ್ವಾಸಿಗಳಲ್ಲ. 3ಆದರೆ ಪ್ರಭು ನಂಬಿಗಸ್ತರು; ಅವರು ನಿಮ್ಮನ್ನು ಬಲಪಡಿಸಿ ಕೆಡುಕನಿಂದ ಕಾಪಾಡುವರು. 4ನಾವು ಆಜ್ಞಾಪಿಸುವುದನ್ನು ನೀವು ಮಾಡುತ್ತೀರಿ ಮತ್ತು ಮುಂದೆಯೂ ಮಾಡುತ್ತಾ ಇರುವಿರಿ ಎಂದು ಪ್ರಭುವಿನಲ್ಲಿ ನಾವು ಭರವಸೆಯಿಟ್ಟಿದ್ದೇವೆ. 5ಪ್ರಭು ನಿಮ್ಮ ಹೃದಯಗಳನ್ನು ನಮ್ಮ ತಂದೆಯ ಪ್ರೀತಿಯೊಳಗೂ ಕ್ರಿಸ್ತನ ಸಹನೆಯೊಳಗೂ ನಡೆಸಲಿ.
ಸೋಮಾರಿತನದ ವಿರುದ್ಧ ಎಚ್ಚರಿಕೆ
6ಸಹೋದರ ಸಹೋದರಿಯರೇ, ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುತ್ತೇವೆ: ನಮ್ಮಿಂದ ಹೊಂದಿದ ಸಂಪ್ರದಾಯಕ್ಕೆ ವಿರುದ್ಧವಾಗಿ ಸೋಮಾರಿಯಾಗಿ ಬದುಕುವ ಪ್ರತಿಯೊಬ್ಬ ಸಹೋದರನಿಂದ ದೂರವಿರಿ. 7ನಾವು ನಿಮ್ಮಲ್ಲಿ ಸೋಮಾರಿಗಳಾಗಿರಲಿಲ್ಲವಾದ್ದರಿಂದ ನೀವು ನಮ್ಮನ್ನು ಅನುಕರಿಸಬೇಕೆಂದು ನಿಮಗೇ ತಿಳಿದಿದೆ. 8ನಾವು ಯಾರ ಆಹಾರವನ್ನೂ ಉಚಿತವಾಗಿ ತಿನ್ನಲಿಲ್ಲ; ಬದಲಾಗಿ ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಪ್ರಯಾಸದಿಂದಲೂ ಕಷ್ಟದಿಂದಲೂ ಹಗಲೂ ರಾತ್ರಿಯೂ ದುಡಿದೆವು. 9ನಮಗೆ ಹಕ್ಕಿಲ್ಲವೆಂದಲ್ಲ, ಆದರೆ ನೀವು ಅನುಕರಿಸುವಂತೆ ನಮ್ಮನ್ನೇ ನಿಮಗೆ ಮಾದರಿಯಾಗಿ ಮಾಡಿಕೊಳ್ಳಲು. 10ನಾವು ನಿಮ್ಮೊಂದಿಗಿದ್ದಾಗಲೂ, “ಯಾರಾದರೂ ಕೆಲಸಮಾಡಲು ನಿರಾಕರಿಸಿದರೆ ಅವನು ತಿನ್ನಬಾರದು,” ಎಂದು ನಿಮಗೆ ಆಜ್ಞಾಪಿಸಿದೆವು. 11ನಿಮ್ಮಲ್ಲಿ ಕೆಲವರು ಸೋಮಾರಿಗಳಾಗಿ ಬದುಕುತ್ತಾ, ಕೆಲಸದಲ್ಲಿ ತೊಡಗದೆ ಪರರ ಕೆಲಸದಲ್ಲಿ ತಲೆಹಾಕುತ್ತಾರೆಂದು ನಾವು ಕೇಳುತ್ತೇವೆ. 12ಅಂಥವರಿಗೆ ನಾವು ಪ್ರಭು ಯೇಸು ಕ್ರಿಸ್ತನಲ್ಲಿ ಆಜ್ಞಾಪಿಸಿ ಪ್ರೋತ್ಸಾಹಿಸುವುದೇನೆಂದರೆ, ಅವರು ಶಾಂತವಾಗಿ ದುಡಿದು ತಮ್ಮ ಸ್ವಂತ ರೊಟ್ಟಿಯನ್ನು ತಿನ್ನಲಿ. 13ಸಹೋದರ ಸಹೋದರಿಯರೇ, ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ. 14ಈ ಪತ್ರದಲ್ಲಿರುವ ನಮ್ಮ ಮಾತಿಗೆ ಯಾರಾದರೂ ಅವಿಧೇಯರಾದರೆ, ಅವನನ್ನು ಗುರುತಿಸಿರಿ; ಅವನು ನಾಚಿಕೆಪಡುವಂತೆ ಅವನ ಸಂಗಡ ಬೆರೆಯಬೇಡಿರಿ. 15ಆದರೂ ಅವನನ್ನು ಶತ್ರುವೆಂದು ಎಣಿಸಬೇಡಿರಿ, ಸಹೋದರನೆಂದು ಎಚ್ಚರಿಸಿರಿ.
ಸಮಾಧಾನ, ವಂದನೆ ಮತ್ತು ಕೃಪೆ
16ಸಮಾಧಾನದ ಪ್ರಭು ತಾವೇ ಎಲ್ಲಾ ಸಮಯದಲ್ಲಿಯೂ ಎಲ್ಲಾ ರೀತಿಯಲ್ಲಿಯೂ ನಿಮಗೆ ಸಮಾಧಾನವನ್ನು ಅನುಗ್ರಹಿಸಲಿ. ಪ್ರಭು ನಿಮ್ಮೆಲ್ಲರ ಸಂಗಡ ಇರಲಿ.
17ಪೌಲನಾದ ನಾನು ಈ ವಂದನೆಯನ್ನು ನನ್ನ ಸ್ವಂತ ಕೈಯಿಂದ ಬರೆಯುತ್ತೇನೆ—ನನ್ನಿಂದ ಬರುವ ಪ್ರತಿಯೊಂದು ಪತ್ರವೂ ನಿಜವಾದದ್ದೆಂಬುದಕ್ಕೆ ಇದೇ ಗುರುತು; ನಾನು ಬರೆಯುವುದು ಹೀಗೆಯೇ. 18ನಮ್ಮ ಪ್ರಭು ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡ ಇರಲಿ.