ಪ್ರಭುವಿನ ದಿನ ಬರುತ್ತದೆ
ಆ ದಿನವು ಕಳ್ಳನಂತೆ ಬರುತ್ತದೆ, ಆದರೆ ಅವರು ಅದರ ವಿಷಯದಲ್ಲಿ ಕತ್ತಲೆಯಲ್ಲಿಲ್ಲ; ಆದ್ದರಿಂದ ಎಚ್ಚರವಾಗಿಯೂ ಸ್ಪಷ್ಟ ಮನಸ್ಸಿನಿಂದಲೂ ಇರಿ. ಕೊನೆಯಲ್ಲಿ ಒಂದು ತ್ವರಿತ ಪಟ್ಟಿ: ನಿಮ್ಮ ನಾಯಕರನ್ನು ಗೌರವಿಸಿರಿ, ಧೈರ್ಯಗೆಟ್ಟವರನ್ನು ಸಂತೈಸಿರಿ, ತಾಳ್ಮೆಯಿಂದಿರಿ, ಸಂತೋಷಪಡಿರಿ, ಪ್ರಾರ್ಥಿಸಿರಿ, ಕೃತಜ್ಞತೆ ಸಲ್ಲಿಸಿರಿ, ಎಲ್ಲವನ್ನೂ ಪರೀಕ್ಷಿಸಿರಿ, ಒಳ್ಳೆಯದನ್ನು ಹಿಡಿದುಕೊಳ್ಳಿರಿ.
5 1ಸಹೋದರ ಸಹೋದರಿಯರೇ, ಕಾಲ ಸಮಯಗಳ ವಿಷಯವಾಗಿ ನಿಮಗೆ ಏನನ್ನೂ ಬರೆಯುವ ಅಗತ್ಯವಿಲ್ಲ. 2ನಮ್ಮ ಪ್ರಭು ಯೇಸುವಿನ ದಿನ ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ ಎಂಬುದು ನಿಮಗೇ ಚೆನ್ನಾಗಿ ತಿಳಿದಿದೆ. 3ಜನರು, “ಸಮಾಧಾನವೂ ಸುರಕ್ಷೆಯೂ” ಎಂದು ಹೇಳುವಾಗ, ಗರ್ಭಿಣಿಗೆ ಪ್ರಸವವೇದನೆ ಬರುವಂತೆ ಹಠಾತ್ತಾಗಿ ನಾಶನ ಅವರ ಮೇಲೆ ಬಂದೆರಗುತ್ತದೆ; ಅವರು ತಪ್ಪಿಸಿಕೊಳ್ಳಲಾರರು. 4ಆದರೆ ಸಹೋದರ ಸಹೋದರಿಯರೇ, ಆ ದಿನ ಕಳ್ಳನಂತೆ ನಿಮ್ಮ ಮೇಲೆ ಬಂದು ನಿಮ್ಮನ್ನು ಬೆರಗುಗೊಳಿಸುವಷ್ಟು ನೀವು ಕತ್ತಲೆಯಲ್ಲಿ ಇಲ್ಲ. 5ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಿ; ನಾವು ರಾತ್ರಿಗಾಗಲೀ ಕತ್ತಲೆಗಾಗಲೀ ಸೇರಿದವರಲ್ಲ. 6ಆದ್ದರಿಂದ ನಾವು ಉಳಿದವರಂತೆ ನಿದ್ರಿಸದೆ, ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ ಇರೋಣ. 7ನಿದ್ರಿಸುವವರು ರಾತ್ರಿಯಲ್ಲಿ ನಿದ್ರಿಸುತ್ತಾರೆ, ಕುಡಿದು ಮತ್ತರಾಗುವವರು ರಾತ್ರಿಯಲ್ಲಿ ಮತ್ತರಾಗುತ್ತಾರೆ. 8ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ, ವಿಶ್ವಾಸವನ್ನೂ ಪ್ರೀತಿಯನ್ನೂ ಎದೆಕವಚವಾಗಿಯೂ ರಕ್ಷಣೆಯ ನಿರೀಕ್ಷೆಯನ್ನು ಶಿರಸ್ತ್ರಾಣವಾಗಿಯೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ. 9ಏಕೆಂದರೆ ನಮ್ಮ ತಂದೆ ನಮ್ಮನ್ನು ಕೋಪಕ್ಕಾಗಿ ಅಲ್ಲ, ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ರಕ್ಷಣೆಯನ್ನು ಹೊಂದುವುದಕ್ಕಾಗಿಯೇ ನೇಮಿಸಿದ್ದಾರೆ. 10ನಮಗಾಗಿ ಮರಣ ಹೊಂದಿದ ಅವರು, ನಾವು ಎಚ್ಚರವಾಗಿದ್ದರೂ ನಿದ್ರಿಸುತ್ತಿದ್ದರೂ ಅವರ ಸಂಗಡವೇ ಜೀವಿಸುವಂತೆ ಹೀಗೆ ಮಾಡಿದರು. 11ಆದ್ದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ ಮತ್ತು ಒಬ್ಬರನ್ನೊಬ್ಬರು ಕಟ್ಟಿ ಬೆಳೆಸಿರಿ.
ಬೆಳಕಿನ ಮಕ್ಕಳಾಗಿ ಜೀವಿಸುವುದು
12ಸಹೋದರ ಸಹೋದರಿಯರೇ, ನಿಮ್ಮ ನಡುವೆ ಕಷ್ಟಪಟ್ಟು ದುಡಿಯುವ, ಪ್ರಭುವಿನಲ್ಲಿ ನಿಮ್ಮನ್ನು ನಡೆಸುವ, ನಿಮ್ಮನ್ನು ತಿದ್ದುವ ಜನರನ್ನು ಗೌರವಿಸಬೇಕೆಂದು ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ. 13ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಅತ್ಯಧಿಕವಾಗಿ ಸನ್ಮಾನಿಸಿರಿ. ಒಬ್ಬರೊಂದಿಗೊಬ್ಬರು ಸಮಾಧಾನದಿಂದ ಜೀವಿಸಿರಿ.
14ಸಹೋದರ ಸಹೋದರಿಯರೇ, ನಾವು ನಿಮ್ಮನ್ನು ಒತ್ತಾಯಿಸುತ್ತೇವೆ: ಸೋಮಾರಿಗಳನ್ನು ತಿದ್ದಿರಿ, ಧೈರ್ಯಗೆಟ್ಟವರನ್ನು ಸಂತೈಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರ ಕಡೆಗೆ ದೀರ್ಘಶಾಂತಿಯುಳ್ಳವರಾಗಿರಿ. 15ಯಾರೂ ಯಾರಿಗೂ ಕೆಟ್ಟದ್ದಕ್ಕೆ ಕೆಟ್ಟದ್ದನ್ನು ಮರಳಿಸದಂತೆ ನೋಡಿಕೊಳ್ಳಿರಿ; ಆದರೆ ಒಬ್ಬರಿಗೊಬ್ಬರೂ ಎಲ್ಲರಿಗೂ ಒಳ್ಳೆಯದನ್ನೇ ಯಾವಾಗಲೂ ಅನುಸರಿಸಿರಿ.
16ಯಾವಾಗಲೂ ಆನಂದಿಸಿರಿ, 17ಎಡೆಬಿಡದೆ ಪ್ರಾರ್ಥಿಸಿರಿ, 18ಎಲ್ಲದರಲ್ಲಿಯೂ ಕೃತಜ್ಞತೆಯನ್ನು ಸಲ್ಲಿಸಿರಿ; ಏಕೆಂದರೆ ಕ್ರಿಸ್ತ ಯೇಸುವಿನಲ್ಲಿ ನಿಮ್ಮ ವಿಷಯವಾಗಿ ಇದೇ ನಮ್ಮ ತಂದೆಯ ಚಿತ್ತ. 19ಪವಿತ್ರಾತ್ಮರನ್ನು ನಂದಿಸಬೇಡಿರಿ. 20ಪ್ರವಾದನೆಗಳನ್ನು ತಾತ್ಸಾರ ಮಾಡಬೇಡಿರಿ, 21ಆದರೆ ಎಲ್ಲವನ್ನೂ ಪರೀಕ್ಷಿಸಿರಿ; ಒಳ್ಳೆಯದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. 22ಎಲ್ಲಾ ವಿಧವಾದ ಕೆಟ್ಟತನದಿಂದ ದೂರವಿರಿ.
23ಸಮಾಧಾನದ ನಮ್ಮ ತಂದೆ ತಾವೇ ನಿಮ್ಮನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಲಿ; ನಮ್ಮ ಪ್ರಭು ಯೇಸು ಕ್ರಿಸ್ತನ ಬರೋಣದಲ್ಲಿ ನಿಮ್ಮ ಆತ್ಮ, ಪ್ರಾಣ ಹಾಗೂ ದೇಹ ಇವೆಲ್ಲವೂ ನಿರ್ದೋಷವಾಗಿ ಕಾಪಾಡಲ್ಪಡಲಿ. 24ನಿಮ್ಮನ್ನು ಕರೆಯುವವರು ನಂಬಿಗಸ್ತರು; ಅವರು ಅದನ್ನು ಖಂಡಿತವಾಗಿ ನೆರವೇರಿಸುವರು.
25ಸಹೋದರ ಸಹೋದರಿಯರೇ, ನಮಗಾಗಿ ಪ್ರಾರ್ಥಿಸಿರಿ.
26ಪವಿತ್ರವಾದ ಮುದ್ದಿನಿಂದ ಎಲ್ಲಾ ಸಹೋದರ ಸಹೋದರಿಯರನ್ನು ವಂದಿಸಿರಿ. 27ಈ ಪತ್ರವನ್ನು ಎಲ್ಲಾ ಸಹೋದರ ಸಹೋದರಿಯರಿಗೆ ಓದಿಹೇಳಿಸಬೇಕೆಂದು ಪ್ರಭುವಿನ ಸನ್ನಿಧಿಯಲ್ಲಿ ನಾನು ನಿಮಗೆ ಆಜ್ಞಾಪಿಸುತ್ತೇನೆ.
28ನಮ್ಮ ಪ್ರಭು ಯೇಸು ಕ್ರಿಸ್ತನ ಕೃಪೆ ನಿಮ್ಮ ಸಂಗಡ ಇರಲಿ.